ಆರ್ಥಿಕ ನೆರವಿಗೆ ಸರಕಾರಕ್ಕೆ ಟೈಲರ್ಸ್‌ ಅಸೋಸಿಯೇಷನ್ ಮನವಿ

Update: 2020-06-13 16:42 GMT

ಉಡುಪಿ, ಜೂ.13: ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ಅತೀವ ಸಂಕಷ್ಟ ಕ್ಕೊಳಗಾದ ವೃತ್ತಿದಾರರಲ್ಲಿ ಹೊಲಿಗೆ ವೃತ್ತಿಯ ಟೈಲರ್‌ಗಳು ಸೇರಿದ್ದು, ಉದ್ಯೋಗವಿಲ್ಲದೇ ಸರಕಾರದ ನೆರವನ್ನು ಎದುರು ನೋಡುತಿದ್ದೇವೆ. ಸಿದ್ಧ ಉಡುಪಿನ ಲಭ್ಯತೆ ಯಿಂದಾಗಿ ಹೊಲಿಗೆಯವರು ತತ್ತರಿಸಿ ಹೋಗಿದ್ದೇವೆ. ಸರಕಾರ ಕೂಡಲೇ ನಮ್ಮ ನೆರವಿಗೆ ಬರಬೇಕಾಗಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್‌ನ ಉಡುಪಿ ಜಿಲ್ಲಾ ಸಮಿತಿ ಹಾಗೂ ಉಡುಪಿ ಕ್ಷೇತ್ರ ಸಮಿತಿ ಸರಕಾರಕ್ಕೆ ಮನವಿ ಮಾಡಿವೆ.

ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ರಾಮಚಂದ್ರ ಹಾಗೂ ಕ್ಷೇತ್ರ ಸಮಿತಿ ಅಧ್ಯಕ್ಷ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ, ಲಾಕ್‌ಡೌನ್‌ನಿಂದಾಗಿ ಯಾವುದೇ ಶುಭ ಕಾರ್ಯಗಳು, ಜಾತ್ರೆ, ಹಬ್ಬಹರಿದಿನಗಳು ಇಲ್ಲದೇ ಇರುವುದರಿಂದ ಹಾಗೂ ಜನಸಾಮಾನ್ಯರಿಗೂ ಯಾವುದೇ ಕೆಲಸವಿಲ್ಲದೇ ಇರುವುದರಿಂದ, ನಮಗೆ ಯಾವುದೇ ರೀತಿಯ ಸಂಪಾದನೆ ಇಲ್ಲದೇ ಸಂಸಾರ ಸಲಹುವುದೇ ದುಸ್ತರವಾಗಿದೆ ಎಂದರು.

ಇದೇ ಕಾರಣದಿಂದ ಆರ್ಥಿಕ ಸಂಕಷ್ಟವನ್ನು ಎದುರಿಸಲಾರದೇ ಟೈಲರ್ ಆಗಿದ್ದ ಕನ್ನರ್ಪಾಡಿಯ ರಘುನಾಥ ಸೇರಿಗಾರ್ ಮೊನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಪರಿಸ್ಥಿತಿ ಬಹಳಷ್ಟು ಟೈಲರ್ ವೃತ್ತಿಬಾಂಧವರದ್ದು ಆಗಿದೆ. ನಮ್ಮನ್ನು ಈ ಸಂಕಷ್ಟದಿಂದ ಪಾರುಮಾಡುವಂತೆ ಪ್ರಧಾನಿ, ಮುಖ್ಯಮಂತ್ರಿ, ಕಾರ್ಮಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಯಾರೊಬ್ಬರೂ ನಮ್ಮ ಮನವಿಗೆ ಸ್ಪಂಧಿಸಿಲ್ಲ ಎಂದು ದಯಾನಂದ ಕೋಟ್ಯಾನ್ ವಿಷಾಧಿಸಿದರು.

ರಾಜ್ಯ ಸರಕಾರ ಕೆಲವೊಂದು ಶ್ರಮಿಕ ವರ್ಗಕ್ಕೆ ಧನಸಹಾಯದ ಘೋಷಣೆ ಮಾಡಿದ್ದರೂ, ಸಂಕಷ್ಟದಲ್ಲಿರುವ ಹೊಲಿಗೆ ವೃತ್ತಿಬಾಂಧವರಿಗೂ ಆರ್ಥಿಕ ನೆರವು ನೀಡುವಂತೆ ಸಹಿಸಂಗ್ರಹಿಸಿ ಮನವಿ ಮಾಡಿ ಮುಖ್ಯಮಂತ್ರಿಗಳಿಗೆ ಕಳುಹಿ ಸಿದ್ದರೂ ಾವುದೇ ಪ್ರಯೋಜನವಾಗಿಲ್ಲ ಎಂದರು.

ಹೀಗಾಗಿ ನಾವೇನೂ ಸಾಲಮನ್ನಾ ಮಾಡಿ, ಶೂನ್ಯ ಬಡ್ಡಿದರಲ್ಲಿ ಸಾಲ ನೀಡಿ ಎಂದು ಕೇಳುತ್ತಿಲ್ಲ. ಕೋವಿಡ್-19ರ ಈ ವಿಷಮ ಸ್ಥಿತಿಯಲ್ಲಿ ಮಾಸಿಕ ಕಂತುಗಳ ರೂಪದಲ್ಲಿ ಸಹಾಯ ಮಾಡುವಂತೆ ಕೋರುತಿದ್ದೇವೆ. ದಶಕದಿಂದ ಹೋರಾಟ ನಡೆಸುತಿದ್ದರೂ ಭವಿಷ್ಯನಿಧಿ ಜಾರಿಗೆ ಸರಕಾರ ಇನ್ನೂ ಮನಸ್ಸು ಮಾಡಿಲ್ಲ. ಇದರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ರಘುನಾಥ ಸೇರಿಗಾರ್ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ವನ್ನು ಘೋಷಿಸುವಂತೆ ನಾವು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.

ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ಇದುವರೆಗೆ ನಮ್ಮ ಕಷ್ಟಗಳೇನೆಂದು ವಿಚಾರಿಸಿಲ್ಲ, ಯಾರೂ ನಮ್ಮ ಸಹಾಯಕ್ಕೆ ಬಂದಿಲ್ಲ. ದಿನಬಳಕೆಯ ಆಹಾರದ ಕಿಟ್‌ಗಳನ್ನು ಜನಪ್ರತಿನಿಧಿಗಳು ನಮಗೆ ನೀಡಿಲ್ಲ ಎಂದು ರಾಮಚಂದ್ರ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕೋಶಾಧಿಕಾರಿ ಅಬ್ದುಲ್ ಖಾದರ್, ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ದಯಾನಂದ ಪ್ರಭು, ಉಪಾಧ್ಯಕ್ಷೆ ಮೀನಾಕ್ಷಿ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News