×
Ad

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ: ಕಾಂಗ್ರೆಸ್ ಟೀಕೆ

Update: 2020-06-13 22:14 IST

ಉಡುಪಿ, ಜೂ.13: ಭೂ ಸುದಾರಣೆ ಕಾಯಿದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವಂತೆ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿರುವುದು ತೀರಾ ಅವೈಜ್ಞಾನಿಕ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.

ಸರಕಾರ ಕೃಷಿ ಭೂಮಿಯ ಮುಕ್ತ ಖರೀದಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸುವ ಮೂಲಕ ರಾಜ್ಯದ ರೈತರನ್ನು ಒಕ್ಕೆಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈತಿದ್ದುಪಡಿಯಿಂದ ಕೈಗಾರಿಕೋದ್ಯಮಕ್ಕೆ ಉತ್ತೇಜನ ದೊರೆಯು ತ್ತದೆ ಎಂದು ಸರಕಾರ ಸಮರ್ಥಿಸಿಕೊಂಡರೂ ಕೈಗಾರಿಕೆ ಹೆಸರಲ್ಲಿ ಜಮೀನು ಖರೀದಿಸಿದವರು ರಿಯಲ್ ಎಸ್ಟೇಟ್ ದಂಧೆಯನ್ನು ಪ್ರಾರಂಭಿಸಬಹುದು ಎಂದು ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.

ಇದರಿಂದ ಇಷ್ಟರವರೆಗೆ ಉಳುವವನೇ ಹೊಲದೊಡೆಯ ಎಂದಿರುವುದನ್ನು ಇನ್ನು ಮುಂದೆ ಉಳ್ಳವನೇ ಭೂಮಿ ಒಡೆಯ ಎಂದು ಬದಲಾಯಿಸ ಲಾಗಿದೆ. ಕೃಷಿಕರಲ್ಲದವರು ಕೃಷಿ ಜಮೀನು ಖರೀದಿಸಿದಾಗ ಕೃಷಿ ಮತ್ತು ಅದಕ್ಕೆ ಸಂಬಂಧ ಪಟ್ಟ ಉಪಕಸುಬುಗಳಿಗೆ ಮಾತ್ರ ಬಳಸಬೇಕು ಎಂದು ತಿದ್ದುಪಡಿಯಲ್ಲಿ ನಮೂದಿಸದೆ ಇರುವುದರಿಂದ ಈ ಅವಕಾಶವನ್ನು ಉಪಯೋಗಿಸಿಕೊಂಡು ರಿಯಲ್ ಎಸ್ಟೇಟ್‌ಗೆ ಕೃಷಿ ಭೂಮಿ ಬಳಕೆ ಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿಕೆ ಕಳವಳ ವ್ಯಕ್ತಪಡಿಸಿದೆ.

ಬಹುರಾಷ್ಟ್ರೀಯ ಕಂಪೆನಿಗಳ ಪ್ರವೇಶಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಮೊದಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಇದೀಗ ಅವರು ಕೃಷಿ ಭೂಮಿಯ ಒಡೆಯರಾಗಲು ಮತ್ತೊಂದು ತಿದ್ದುಪಡಿಯನ್ನು ತರಲಾಗಿದೆ. ಇದರಿಂದಾಗಿ ಬಿಜೆಪಿ ಸರಕಾರ ನಿರಂತರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೃಷಿಕರ ಭವಿಷ್ಯದ ಮೇಲೆ ಪರಿಣಾಮ ಬೀರುವ ಈ ಮಸೂದೆಗಳು ರೈತರ ಆದಾಯ ಭದ್ರತೆ ಹಾಗೂ ದೇಶದ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರಲಿದೆ ಎಂದು ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ವಿರೋಧ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News