ಕೊರೋನ ನಿಭಾಯಿಸುವ ರೀತಿಗೆ ಅಸಮಾಧಾನ: ನೇಪಾಳದಲ್ಲಿ ಪ್ರತಿಭಟನೆ

Update: 2020-06-13 16:52 GMT

ಕಠ್ಮಂಡು (ನೇಪಾಳ), ಜೂ. 13: ನೇಪಾಳವು ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ರೀತಿಯನ್ನು ಶನಿವಾರ ರಾಜಧಾನಿ ಕಠ್ಮಂಡುವಿನಲ್ಲಿ ನೂರಾರು ಮಂದಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಏಳು ಮಂದಿ ವಿದೇಶೀಯರು ಸೇರಿದಂತೆ 10 ಮಂದಿಯನ್ನು ಬಂಧಿಸಿದರು.

ನೇಪಾಳದಲ್ಲಿ ಎರಡನೇ ಕೊರೋನ ವೈರಸ್ ಸೋಂಕು ಪತ್ತೆಯಾದ ಬಳಿಕ ಮಾರ್ಚ್‌ನಲ್ಲಿ ಸಂಪೂರ್ಣ ಬೀಗಮುದ್ರೆಯನ್ನು ಹೇರಲಾಗಿತ್ತು. ಆದರೆ, ಆ ಬಳಿಕ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 5,062ಕ್ಕೆ ಏರಿದೆ ಹಾಗೂ 16 ಮಂದಿ ಮೃತಪಟ್ಟಿದ್ದಾರೆ.

ಸಾಂಕ್ರಾಮಿಕವನ್ನು ನಿಭಾಯಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದ ಸರಕಾರದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿವೆ.

ನಿರಂತರ ಮೂರನೇ ದಿನವಾದ ಶನಿವಾರ ಸುಮಾರು 1,000 ಪ್ರತಿಭಟನಕಾರರು ಕಠ್ಮಂಡುವಿನ ಪ್ರಮುಖ ಬೀದಿಯಲ್ಲಿ ನೆರೆದರು ಎಂದು ಪೊಲೀಸರು ತಿಳಿಸಿದರು. ಈ ಸಂದರ್ಭದಲ್ಲಿ ಏಳು ವಿದೇಶೀಯರನ್ನು ನೇಪಾಳದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿರುವುದಕ್ಕಾಗಿ ಬಂಧಿಸಲಾಗಿದೆ ಎಂದರು.

ಉತ್ತಮ ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸಬೇಕು, ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News