ಜಾನುವಾರು ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಪಿಎಫ್‌ಐ ಖಂಡನೆ
ಮಂಗಳೂರು, ಜೂ.14: ನಗರದ ಕೊಟ್ಟಾರದಲ್ಲಿ ರವಿವಾರ ಮುಂಜಾನೆ ಜಾನುವಾರು ಸಾಗಾಟದ ವಾಹನವನ್ನು ತಡೆದು ನಿಲ್ಲಿಸಿ ವ್ಯಾಪಾರಿಯ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಮಾರಣಾಂತಿಕ ದಾಳಿ ನಡೆಸಿರುವುದನ್ನು ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತೀವ್ರವಾಗಿ ಖಂಡಿಸಿದ್ದಾರೆ.
ಜೋಕಟ್ಟೆಯ ಜಾನುವಾರು ವ್ಯಾಪಾರಿ ಮುಹಮ್ಮದ್ ಹನೀಫ್ ಸೂಕ್ತ ದಾಖಲೆಯೊಂದಿಗೆ ಜಾನುವಾರು ವ್ಯಾಪಾರ ನಡೆಸುತ್ತಿದ್ದಾರೆ. ಅಂತೆಯೇ ಹನೀಫ್ ರವಿವಾರ ಮುಂಜಾನೆ ನಗರದ ಕುದ್ರೋಳಿಯ ಕಸಾಯಿ ಖಾನೆಗೆ ನಾಲ್ಕು ಎತ್ತುಗಳನ್ನು ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದರು. ವೈರಲ್ ಆಗಿರುವ ಸಾಗಾಟದ ಫೋಟೊ ಕೂಡ ಈ ವಿಚಾರವನ್ನು ಬಹಳ ಸ್ಪಷ್ಟಪಡಿಸುತ್ತಿದೆ. ಆದರೆ ಕೊಟ್ಟಾರ ಚೌಕಿಯ ಇನ್ಫೋಸಿಸ್ ಬಳಿ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದ ದುಷ್ಕರ್ಮಿಗಳು ವಾಹನವನ್ನು ತಡೆದಿದ್ದಾರೆ. ಅಲ್ಲದೆ ಹನೀಫ್ ವಾಹನಕ್ಕೆ ಕಟ್ಟಿ ಹಾಕಿ ಆತನಿಗೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನಕ್ಕೂ ಹಾನಿ ಮಾಡಿ, ಆತನಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ. ಪೊಲೀಸ್ ಠಾಣೆಯ ಕೆಲವೇ ಅಂತರದಲ್ಲಿ ಇಂತಹ ಒಂದು ಘಟನೆ ನಡೆದಿರುವುದು ನಿಜಕ್ಕೂ ಅಚ್ಚರಿದಾಯಕವಾಗಿದೆ ಎಂದು ಇಜಾಝ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಆದರೆ ಖರೀದಿ, ವೈದ್ಯಕೀಯ ಮತ್ತು ಸಾಗಾಟದ ಸೂಕ್ತ ದಾಖಲೆಗಳನ್ನು ಹೊಂದಿದ್ದರೂ ಪೊಲೀಸರು ಜಾನುವಾರು ವ್ಯಾಪಾರಿಯ ವಿರುದ್ಧ ಗೋಕಳ್ಳತನ ಪ್ರಕರಣವನ್ನು ದಾಖಲಿಸಿರುವುದು ವಿಪರ್ಯಾಸ. ಜೊತೆಗೆ ಪೊಲೀಸರು ಘಟನೆಗೆ ಸಂಬಂಧಿಸಿ, ಹಲ್ಲೆಗೊಳಗಾದ ಸಂತ್ರಸ್ತನ ಹೇಳಿಕೆಯನ್ನೂ ಸಮರ್ಪಕವಾಗಿ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಸಕ್ರಮವಾಗಿ ಸಾಗಾಟ ನಡೆಸುತ್ತಿದ್ದ ವ್ಯಾಪಾರಿಯ ಮೇಲೆ ದಾಳಿ ನಡೆಸಿದ ಮತ್ತು ಜಿಲ್ಲೆಯ ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರಗಿಸಬೇಕು. ಸಂಘಪರಿವಾರದ ಅನೈತಿಕ ಪೊಲೀಸ್‌ಗಿರಿಯನ್ನು ಮಟ್ಟ ಹಾಕಲು ಕ್ರಮಕೈಗೊಳ್ಳಬೇಕು. ಅದೇ ರೀತಿ ಜಾನುವಾರು ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆಯು ಸೂಕ್ತ ರಕ್ಷಣೆಯನ್ನು ಖಾತರಿಪಡಿಸಬೇಕೆಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.