ಮಣಿಪಾಲದಲ್ಲಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಬದಿ ಗುಡ್ಡ ಜರಿತ
ಉಡುಪಿ, ಜೂ.14: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಣಿಪಾಲ ಐನಾಕ್ಸ್ ಚಿತ್ರಮಂದಿರ ಎದುರಿನ ರಾಷ್ಟ್ರೀಯ ಹೆದ್ದಾರಿಗೆ ಸಮೀಪದ ಮಣ್ಣಿನ ಗುಡ್ಡ ಜರಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಬರುವ ರಸ್ತೆಯ ಬದಿಯಲ್ಲಿರುವ ಮುರ ಕಲ್ಲಿನ ಗುಡ್ಡವನ್ನು ಇತ್ತೀಚೆಗೆ ಅಗೆದು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ಮಾಡಲಾಗಿತ್ತು. ಇದೀಗ ಸತತ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಒಮ್ಮೇಲೆ ಜರಿದು ರಸ್ತೆಗೆ ಬಿದ್ದಿದೆ.
ವಾಹನಗಳು ಸಂಚರಿಸುತ್ತಿರುವ ಸಂದರ್ಭವೇ ಈ ಘಟನೆ ನಡೆದರೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ಕೆಲವು ವರ್ಷದ ಹಿಂದೆ ಕೂಡ ಇದೇ ಗುಡ್ಡ ಕುಸಿದು ಬಿದ್ದಿತ್ತು. ಇದೀಗ ಹೆದ್ದಾರಿ ಕಾಮಗಾರಿ ಮುಗಿದರೂ ಮತ್ತೆ ಕುಸಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮನೆಗಳಿಗೆ ಹಾನಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 55.82 ಮೀ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 67.2 ಮೀ.ಮೀ., ಕುಂದಾಪುರ 49.2 ಮೀ.ಮೀ. ಹಾಗೂ ಕಾರ್ಕಳ ತಾಲೂಕಿನಲಟಲಿ 51.07 ಮೀ.ಮೀ. ಮಳೆಯಾಗಿದೆ.
ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಸುಮತಿ ಮರಕಾಲ ಎಂಬವರ ಮನೆಗೆ ಗಾಳಿಮಳೆಯಿಂದ ಭಾಗಃಶ ಹಾನಿಯಾಗಿದ್ದು, ಸುಮಾರು 30 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಹಲುವಳ್ಳಿ ಗ್ರಾಮದ ಅಪ್ಪಿ ಯಾನೆ ರತ್ನ ಕುಲಾತಿ ಎಂಬವರ ಮನೆಗೆ ಹಾನಿಯಾಗಿ ಸುಮಾರು 15ಸಾವಿರ ರೂ. ನಷ್ಟ ಉಂಟಾಗಿರುವ ಬಗ್ಗೆ ತಾಲೂಕು ಕಚೇರಿ ಮೂಲಗಳು ತಿಳಿಸಿವೆ.