ಕುಂದಾಪುರ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ : ಬೋರ್ಡ್ ಪ್ರತ್ಯಕ್ಷ!
ಕುಂದಾಪುರ, ಜೂ.14: ವಿಳಂಬ ಕಾಮಗಾರಿಯಿಂದಾಗಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆಯ ಸರ್ವಿಸ್ ರಸ್ತೆಯು ಮಳೆ ನೀರಿನಿಂದ ಸಂಚರಿಸಲು ಅಸಾಧ್ಯವಾಗುತ್ತಿರುವುದರಿಂದ ಸಾರ್ವಜನಿಕರು ಕಾಮಗಾರಿ ಗುತ್ತಿಗೆ ವಹಿಸಿರುವ ಕಂಪೆನಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಪರಿಣಾಮವಾಗಿ ಸರ್ವಿಸ್ ರಸ್ತೆಯಲ್ಲಿ ಸಾರ್ವಜನಿಕರು ಫಲಕವೊಂದು ಆಳವಡಿಸಿದ್ದು, ಅದರಲ್ಲಿ ಕಂಪೆನಿ ಹಾಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳನ್ನು ಟೀಕಿಸಲಾಗಿದೆ. ‘ನವಯುಗ ಮಹಿಮೆ! ನೀರಿನಲ್ಲಿ ಚಲಿಸುವ ವಾಹನ ಗಳಿಗೆ ಮಾತ್ರ ಪ್ರವೇಶ! ಈಜುಕೊಳ ಕಾಮಗಾರಿ ಪ್ರಗತಿಯಲ್ಲಿದೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾತ್ರ ಪ್ರವೇಶ’ ಎಂಬುದಾಗಿ ಬರೆಯ ಲಾಗಿದೆ.
ಅವೈಜ್ಞಾನಿಕ ಮತ್ತು ವಿಳಂಬ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲೇ ಮಳೆಯ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಮೊದಲ ಮಳೆಗೆ ಸಾರ್ವಜನಿಕರು ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಸಮಸ್ಯೆ ಪರಿಹಾರಕ್ಕೆ ಸ್ಥಳೀಯರು ಒತ್ತಾಯ ಮಾಡಿದರೂ ಕಂಪೆನಿ, ಅಧಿಕಾರಿ ಗಳು, ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.