×
Ad

ದ.ಕ. ಜಿಲ್ಲಾದ್ಯಂತ ಭಾರೀ ಮಳೆ : ಮನೆಗಳಿಗೆ ಹಾನಿ, ತಡೆಗೋಡೆ ಕುಸಿತ, ಉರುಳಿದ ಮರ-ವಿದ್ಯುತ್ ಕಂಬ

Update: 2020-06-14 20:38 IST

ಮಂಗಳೂರು, ಜೂ.14: ದ.ಕ.ಜಿಲ್ಲೆಯಲ್ಲಿ ಮುಂಗಾರು ಮಳೆ ವೇಗ ಪಡೆಯುತ್ತಿದ್ದು, ಶನಿವಾರ ರಾತ್ರಿಯಿಂದ ರವಿವಾರವಿಡೀ ಮುಂಗಾರು ಬಿರುಸುಗೊಂಡಿದೆ. ಎಡಬಿಡದೆ ಸುರಿದ ಭಾರೀ ಮಳೆಯಿಂದ ಕೆಲವು ಕಡೆ ಮನೆಗೆ ಹಾನಿಯಾಗಿದೆ, ತಡೆಗೋಡೆ ಕುಸಿದಿದೆ. ಮರ ಸಹಿತ ವಿದ್ಯುತ್ ಕಂಬ ಉರುಳಿವೆ, ಬಾವಿಯೊಂದು ನೆಲಸಮವಾಗಿದೆ. ಈ ಮಧ್ಯೆ ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ.

ರವಿವಾರ ಮುಂಜಾನೆಯಿಂದ ಎಡೆಬಿಡದೆ ಸುರಿದ ಮಳೆಗೆ ಜನಜೀವನ ಭಾಗಶಃ ಅಸ್ತವ್ಯಸ್ತಗೊಂಡಿತು. ಕೆಲವು ಕಡೆ ಮಳೆ ನೀರು ಮನೆಯೊಳಗೆ ನುಗ್ಗಿದರೆ, ಕೊಡಕಲ್ ಹಾಗೂ ಕಾವೂರಿನಲ್ಲಿ ಮನೆಗೆ ಹಾನಿ ಸಂಭವಿಸಿದೆ. ಪಾಂಡೇಶ್ವರ ಮತ್ತು ಜಪ್ಪಿನಮೊಗರಿನಲ್ಲಿ ಮರಗಳು ಮಗುಚಿ ಬಿದ್ದಿವೆ.

ಮಂಗಳೂರು ನಗರವಲ್ಲದೆ ಗ್ರಾಮಾಂತರದಲ್ಲೂ ಉತ್ತಮ ಮಳೆಯಾಗಿದೆ. ಒಳಚರಂಡಿಯಲ್ಲಿ ಹೂಳು ತುಂಬಿದ ಕಾರಣ ರಸ್ತೆಯಲ್ಲೇ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಿಂಟಾಯಿತು. ಪಂಪ್‌ವೆಲ್, ಜ್ಯೋತಿ, ಕೊಟ್ಟಾರ ಚೌಕಿ ಸಹಿತ ವಿವಿಧ ಭಾಗದಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ಸುಗಮ ಸಂಚಾರಕ್ಕೆ ಅಡ್ಡಿಯಾಯಿತು.

ನಗರದ ಪಡೀಲ್ ಕೊಡಕಲ್‌ನ ಸುಗಂಧಿ ಎಂಬವರ ಮನೆಗೆ ಪಕ್ಕದ ತಡೆಗೋಡೆ ಬಿದ್ದು ಹಾನಿ ಸಂಭವಿಸಿದೆ. ಭಾರೀ ಮಳೆಗೆ ತಡೆಗೋಡೆಯು ಮನೆಯ ಕೋಣೆಯ ಭಾಗಕ್ಕೆ ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಕೋಣೆಯಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿಹೋಗಿದೆ. ಕಾವೂರಿನಲ್ಲೂ ಮನೆಯೊಂದಕ್ಕೆ ಹಾನಿಯಾಗಿದೆ. ನಗರದ ಸೂಟರ್‌ಪೇಟೆಯಲ್ಲಿ ಮನೆಯೊಂದಕ್ಕೆ ಮಳೆನೀರು ನುಗ್ಗಿದೆ. ಮುಕ್ಕ ಚೆಕ್‌ಪೋಸ್ಟ್ ಸಮೀಪದ ಕೊಂಕಣಬೈಲು ಎಂಬಲ್ಲಿ ಪಂಜ ಭಾಸ್ಕರ್ ಭಟ್ ಎಂಬವರ ಮನೆಯ ಮುಂಭಾಗ ಶನಿವಾರ ರಾತ್ರಿ ಸುಮಾರು 1:30ಕ್ಕೆ ಎರಡು ವಿದ್ಯುತ್ ಕಂಬ ತುಂಡಾಗಿ ಬಿದ್ದಿವೆ. ತಕ್ಷಣ ಮನೆಮಂದಿ ಎಚ್ಚೆತ್ತುಕೊಂಡ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಅಂಬ್ಲಮೊಗರು ಗ್ರಾಮದ ತಿಲಕ್‌ನಗರ ಎಂಬಲ್ಲಿ ಗಿರಿಜಾ ಎಂಬವರ ಮನೆಯ ತಡೆಗೋಡೆ ಕುಸಿದುಬಿದ್ದ ಪರಿಣಾಮ ಕೆಳಗಡೆಯಿದ್ದ ರಝಿಯಾ ಎಂಬವರ ಮನೆಗೆ ಹಾನಿಯಾಗಿದೆ. ತಡೆಗೋಡೆ ಕುಸಿತದಿಂದ ಗಿರಿಜಾರ ಮನೆಯೂ ಅಪಾಯಕ್ಕೆ ಸಿಲುಕಿದೆ. ಸ್ಥಳಕ್ಕೆ ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ರಫೀಕ್, ಸದಸ್ಯೆ ಧನಲಕ್ಷ್ಮಿ ಭಟ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಕೊಣಾಜೆ ಗ್ರಾಮದ ಪಟ್ಟೋರಿಯಲ್ಲಿ ಶಾಂತಪ್ಪಎಂಬವರ ಬಾಡಿಗೆ ಮನೆಯ ಮೇಲ್ಭಾಗದಲ್ಲಿದ್ದ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮೇಲ್ಛಾವಣಿ ಸಂಪೂರ್ಣ ಕುಸಿದುಬಿದ್ದಿದೆ. ಈ ಮನೆಯಲ್ಲಿ ತಿರುಮಲ ಸ್ವಾಮಿ ಎಂಬವರ ಕುಟುಂಬ ವಾಸವಿದ್ದು, ಮನೆಮಂದಿ ಇರುವಾಗಲೇ ತಡೆಗೋಡೆಯು ಕುಸಿದು ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಈ ವೇಳೆ ಮನೆಯೊಳಗಿದ್ದ ಸದಸ್ಯರು ಹೊರಗೆ ಓಡಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ಪುಳಿಂಚಾಡಿಯ ಆಂಟೊನಿ ವಿನ್ಸೆಂಟ್ ಲೋಬೊ ಎಂಬವರ ಮನೆಗೆ ಪಕ್ಕದ ಮನೆಯ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟು ಮನೆಗೆ ಅಪಾರ ಹಾನಿ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್, ಗ್ರಾಪಂ ಅಧ್ಯಕ್ಷ ನಝರ್ ಪಟ್ಟೋರಿ, ಸದಸ್ಯ ರವಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹರೇಕಳ ಗ್ರಾಮದ ಆಲಡ್ಕ ಎಂಬಲ್ಲಿ ಮನೆಯೊಂದರ ತಡೆಗೋಡೆ ಕುಸಿದು ಬಿದ್ದಿದೆ. ಇದರಿಂದ ಕೆಳಭಾಗದಲ್ಲಿದ್ದ ಯೂಸುಫ್ ಎಂಬವರ ಮನೆಯ ಹಿಂಭಾಗದಲ್ಲಿದ್ದ ತೆರೆದ ಬಾವಿ ಭಾಗಶಃ ಮುಚ್ಚಲ್ಪಟ್ಟಿದೆ. ಸ್ಥಳಕ್ಕೆ ಗ್ರಾಪಂ ಸದಸ್ಯ ಅಶ್ರಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಉಳ್ಳಾಲದಲ್ಲಿ ಕಡಲು ಪ್ರಕ್ಷ್ಷುಬ್ಧ: ಉಳ್ಳಾಲದಲ್ಲಿ ಶನಿವಾರದಿಂದಲೇ ಕಡಲು ಪ್ರಕ್ಷುಬ್ಧಗೊಂಡಿವೆ. ರಾತ್ರಿಯಿಡೀ ಕಡಲ ಅಬ್ಬರ ಜೋರಾಗಿತ್ತು. ರವಿವಾರ ಭಾರೀ ಮಳೆಯೊಂದಿಗೆ ಕಡಲಿನ ಅಲೆಯು ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತ್ತು.

ಉಳ್ಳಾಲ ಮುಕ್ಕಚೇರಿ-ಕೈಕೋ ರಸ್ತೆಯ ಕಡಲ ತೀರದಲ್ಲಿ ಕಡಲಿನ ಆರ್ಭಟವಿದೆ. ಈಗಾಗಲೆ ತಡೆಗೋಡೆಯಾಗಿ ಕಲ್ಲುಗಳನ್ನು ಜೋಡಿಸಿಡ ಲಾಗಿದೆ. ಆದರೆ, ಕಡಲು ಇನ್ನಷ್ಟು ಪ್ರಕ್ಷುಬ್ಧಗೊಂಡರೆ ಅಲೆಗಳು ಈ ಕಲ್ಲುಗಳನ್ನು ದಾಟಿ ಬರುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿನ ಜನರ ಸಂಕಷ್ಟವನ್ನು ಜನಪ್ರತಿನಿಧಿಗಳು ಅರಿತು ಸ್ಪಂದಿಸಬೇಕಿದೆ ಎಂದು ಸ್ಥಳೀಯ ರಿಕ್ಷಾ ಚಾಲಕ ಎನ್. ಲತೀಫ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News