ಭಾರತ ಈಗ ದುರ್ಬಲ ರಾಷ್ಟ್ರವಲ್ಲ: ರಾಜನಾಥ್ ಸಿಂಗ್

Update: 2020-06-14 15:57 GMT

ಹೊಸದಿಲ್ಲಿ, ಜೂ.14: ಲಡಾಕ್ ಗಡಿಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಚೀನಾ ಒಲವು ತೋರಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಗಡಿ ರಕ್ಷಣೆಯ ವಿಷಯದಲ್ಲಿ ಮತ್ತು ರಾಷ್ಟ್ರದ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿ ಆಯೋಜಿಸಿದ್ದ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಈಗ ದುರ್ಬಲ ರಾಷ್ಟ್ರವಲ್ಲ ಮತ್ತು ಅದರ ರಕ್ಷಣಾ ಸಾಮರ್ಥ್ಯ ಹೆಚ್ಚಿದೆ ಎಂದು ಹೇಳಿದ್ದಾರೆ. ಗಡಿಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಸಂಸತ್ತನ್ನು ಅಥವಾ ಯಾರನ್ನೂ ಕತ್ತಲಲ್ಲಿ ಇರಿಸುವುದಿಲ್ಲ. ಸೂಕ್ತ ಕಾಲದಲ್ಲಿ ಈ ಕುರಿತ ವಿವರವನ್ನು ಹಂಚಿಕೊಳ್ಳಲಾಗುವುದು ಎಂದಿದ್ದಾರೆ.

ಯಾವುದೇ ಸಂದರ್ಭದಲ್ಲಿ ರಾಷ್ಟ್ರದ ಸ್ವಾಭಿಮಾನದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿದೆ. ಆದರೆ ಈ ಸಾಮರ್ಥ್ಯವನ್ನು ಬೇರೆಯವರನ್ನು ಬೆದರಿಸಲು ಬಳಸದೆ, ದೇಶದ ರಕ್ಷಣೆಗೆ ಮಾತ್ರ ಬಳಸಲಾಗುವುದು. ಭಾರತ- ಚೀನಾ ಗಡಿಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಉಭಯ ದೇಶಗಳು ನಿರ್ಧರಿಸಿವೆ . ಚೀನಾದೊಂದಿಗೆ ಗಡಿಭಾಗದಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟನ್ನು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಯ ಮೂಲಕ ಪರಿಹರಿಸಲು ಭಾರತ ನಡೆಸಿದ್ದ ಪ್ರಯತ್ನಕ್ಕೆ ಫಲ ದೊರಕಿದೆ ಎಂದವರು ಹೇಳಿದ್ದಾರೆ.

370ನೇ ವಿಧಿ ರದ್ಧತಿಯಿಂದ ಜಮ್ಮು ಮತ್ತು ಕಾಶ್ಮೀರದ ಸರ್ವಾಂಗೀಣ ಅಭಿವೃದ್ಧಿಗೆ ವೇಗ ದೊರಕಲಿದೆ. ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ ಸರಕಾರ ಎಷ್ಟೊಂದು ಅಭಿವೃದ್ಧಿ ಕಾರ್ಯ ನಡೆಸಲಿದೆ ಎಂದರೆ, ಮುಂಬರುವ ವರ್ಷಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಜನತೆ ತಾವೂ ಕೂಡಾ ಭಾರತದ ಭಾಗವಾಗಿರಬೇಕು ಎಂದು ಆಗ್ರಹಿಸುವಂತಾಗುತ್ತದೆ. ಆಗ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ನಮ್ಮ ಸಂಸತ್ತಿನ ನಿರ್ಣಯ ಈಡೇರುತ್ತದೆ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News