ಅಭಿಮಾನಿಯ ಪರವಾಗಿ ಕೇರಳ ನೆರೆ ಸಂತ್ರಸ್ತರಿಗಾಗಿ 1 ಕೋ.ರೂ. ದೇಣಿಗೆ ನೀಡಿದ್ದ ಸುಶಾಂತ್ ಸಿಂಗ್

Update: 2020-06-14 16:11 GMT

ಹೊಸದಿಲ್ಲಿ,ಜೂ.14: ಎರಡು ವರ್ಷಗಳ ಹಿಂದೆ ಕೇರಳದಲ್ಲಿ ಉಂಟಾಗಿದ್ದ ಭಾರೀ ನೆರೆ ಎಲ್ಲವನ್ನೂ ನುಂಗಿ ಹಾಕಿತ್ತು. ಅದೆಷ್ಟೋ ಜೀವಗಳು ಬಲಿಯಾಗಿದ್ದವು, ಎಷ್ಟೋ ಜನರು ಸರ್ವಸ್ವವನ್ನೂ ಕಳೆದುಕೊಂಡು ನಿರ್ಗತಿಕರಾಗಿ ಬೀದಿಗೆ ಬಿದ್ದಿದ್ದರು. ರಾಜ್ಯದ ಪುನರ್‌ನಿರ್ಮಾಣಕ್ಕಾಗಿ ಉದಾರ ಹೃದಯಿಗಳು ತಮ್ಮಿಂದ ಸಾಧ್ಯವಿದ್ದ ಎಲ್ಲ ನೆರವುಗಳನ್ನೂ ನೀಡಿದ್ದರು. ಇನ್‌ಸ್ಟಾಗ್ರಾಂ ಬಳಕೆದಾರ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಯೋರ್ವ ಆಗ ನೆರೆ ಸಂತ್ರಸ್ತರಿಗೆ ಆಹಾರವನ್ನು ಒದಗಿಸಲು ಬಯಸಿದ್ದ,ಏಕೆಂದರೆ ಆತನ ಬಳಿ ನಗದು ದೇಣಿಗೆ ನೀಡಲು ಹಣವಿರಲಿಲ್ಲ. ಅಭಿಮಾನಿಯ ಉದಾತ್ತತೆಗೆ ಸೋತಿದ್ದ ಸುಶಾಂತ್ ಆತನ ಪರವಾಗಿ ಕೇರಳ ನೆರೆ ಪರಿಹಾರ ನಿಧಿಗೆ ಒಂದು ಕೋಟಿ ರೂ.ಗಳ ಬೃಹತ್ ದೇಣಿಗೆಯನ್ನು ಸಲ್ಲಿಸುವುದಾಗಿ ಭರವಸೆ ನೀಡಿದ್ದರು.

ರವಿವಾರ ಮಧ್ಯಾಹ್ನ ಸುಶಾಂತ್ ಅಕಾಲಿಕ ಸಾವಿನ ಸುದ್ದಿ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದಂತೆ ಅವರು ಈ ಅಭಿಮಾನಿಯೊಂದಿಗೆ ನಡೆಸಿದ್ದ ಹಳೆಯ ಇನ್‌ಸ್ಟಾಗ್ರಾಂ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳೂ ಮತ್ತೆ ಕಾಣಿಸಿಕೊಂಡಿವೆ.

ಅಭಿಮಾನಿಗೆ ಭರವಸೆ ನೀಡಿದ್ದಂತೆ ಸುಶಾಂತ್ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋ.ರೂ.ಗಳ ದೇಣಿಗೆಯನ್ನು ಸಲ್ಲಿಸಿದ್ದರು. ನಂತರ ಸುಶಾಂತ್‌, “ಪ್ರೀತಿಯ ಗೆಳೆಯ,ನಿಮಗೆ ಭರವಸೆ ನೀಡಿದ್ದಂತೆ ನೀವು ಏನನ್ನು ಮಾಡಲು ಬಯಸಿದ್ದಿರೋ ಅದನ್ನು ಮಾಡಿದ್ದೇನೆ. ನಾನು ಹೀಗೆ ಮಾಡಲು ನೀವು ಸ್ಫೂರ್ತಿಯಾಗಿದ್ದೀರಿ, ಹೀಗಾಗಿ ನಿಮ್ಮ ಬಗ್ಗೆ ನನಗೆ ತುಂಬ ಹೆಮ್ಮೆಯಿದೆ. ಯಾವುದು ಅತ್ಯಂತ ಅಗತ್ಯವಾಗಿತ್ತೋ ಅದನ್ನು ನೀವು ಪೂರೈಸಿದ್ದೀರಿ. ಅಭಿನಂದನೆಗಳು” ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದರು.

ಪಿಣರಾಯಿ ಸಂತಾಪ

ಸುಶಾಂತ್ ಅವರ ನಿಸ್ವಾರ್ಥ ಕೊಡುಗೆಯನ್ನು ಸ್ಮರಿಸುತ್ತ ಅವರ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿ ಟ್ವೀಟಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, “ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲವೆಂಬ ಸುದ್ದಿ ನಮಗೆ ತುಂಬ ದುಃಖವನ್ನುಂಟು ಮಾಡಿದೆ. ಅವರ ಅಕಾಲಿಕ ಸಾವಿನಿಂದ ಭಾರತೀಯ ಚಿತ್ರೋದ್ಯಮಕ್ಕೆ ಭಾರೀ ನಷ್ಟವಾಗಿದೆ. ಅವರ ಕುಟುಂಬ,ಸ್ನೇಹಿತರು ಮತ್ತು ಬೆಂಬಲಿಗರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಕೇರಳ ನೆರೆ ಸಂದರ್ಭದಲ್ಲಿ ಅವರ ಬೆಂಬಲವನ್ನು ನಾವು ಸ್ಮರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ. ಟ್ವೀಟ್ ಜೊತೆ ಸುಷಾಂತ್ ಚಿತ್ರವನ್ನೂ ಅವರು ಲಗತ್ತಿಸಿದ್ದಾರೆ.

ಎಲ್ಲರಂತಿರಲಿಲ್ಲ

 ಒಳ್ಳೆಯ ಕೆಲಸಕ್ಕೆ ದೇಣಿಗೆಯನ್ನು ನೀಡುವ ತಾರೆಯರನ್ನು ನಾವು ನೋಡಿದ್ದೇವೆ. ಆದರೆ ಬಹುಶಃ ಈ ರೀತಿಯಲ್ಲಿ ಅಲ್ಲ. ಸುಶಾಂತ್ ಬಹುಬೇಡಿಕೆಯ ತಾರೆಯಾಗಿದ್ದರೂ ತಳಮಟ್ಟದಲ್ಲಿಯೂ ಅಭಿಮಾನಿಗಳೊಂದಿಗೆ ಸಂಪರ್ಕವಿಟ್ಟುಕೊಂಡಿರುವ ಕೆಲವೇ ಬಾಲಿವುಡ್ ನಟರ ಪೈಕಿ ಒಬ್ಬರಾಗಿದ್ದರು. ಅವರು ಪ್ರತಿಯೊಂದೂ ಕಮೆಂಟ್‌ನ್ನು ಗಮನವಿಟ್ಟು ಓದುತ್ತಿದ್ದರು. ತನ್ನ ಮನಸ್ಸನ್ನು ತಟ್ಟಿದ ಕಮೆಂಟ್‌ಗಳಿಗೆ ಉತ್ತರಿಸುತ್ತಿದ್ದರು. ಅವರು ಹಲವಾರು ಬಾರಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಅಭಿಮಾನಿಗಳೊಂದಿಗೆ ಬೌದ್ಧಿಕ ಚರ್ಚೆಗಳಲ್ಲಿಯೂ ತೊಡಗಿಕೊಳ್ಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News