ಚೀನಾದಲ್ಲಿ ಒಂದೇ ದಿನ ಮತ್ತೆ 57 ಮಂದಿಗೆ ಕೊರೋನ ಸೋಂಕು ಕೋವಿಡ್-19 ಎರಡನೆ ಅಲೆ ಆರಂಭ?

Update: 2020-06-14 17:14 GMT

ಬೀಜಿಂಗ್, ಜೂ.14: ಚೀನಾದಲ್ಲಿ ರವಿವಾರ 57 ಕೊರೋನ ಸೋಂಕಿನ ಪ್ರಕರಣ ಗಳು ವರದಿಯಾಗಿದ್ದು, ಇದು ಎಪ್ರಿಲ್‌ನಿಂದೀಚೆಗೆ ಒಂದು ದಿನದ ಗರಿಷ್ಠ ಸಂಖ್ಯೆ ಯಾಗಿದೆ. ಇದರೊಂದಿಗೆ ಚೀನಾದಲ್ಲಿ ಕೊರೋನ ಹಾವಳಿ ಮತ್ತೆ ತಲೆಯೆತ್ತಿರುವ ಬಗ್ಗೆ ವ್ಯಾಪಕ ಭೀತಿಯುಂಟಾಗಿದೆ.

  ಜಗತ್ತಿನಲ್ಲೇ ಕಳೆದ ವರ್ಷಾಂತ್ಯದಲ್ಲಿ ಮೊದಲ ಬಾರಿಗೆ ಕೊರೋನ ವೈರಸ್ ಸೋಂಕು ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತ್ತು. ಆನಂತರ ಈ ವರ್ಷ ಆರಂಭದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ನಂತಹ, ತ್ವರಿತ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗವು ನಿಯಂತ್ರಣಕ್ಕೆ ಬಂದಿತ್ತು.

    ಬೀಜಿಂಗ್‌ನಲ್ಲಿ ಇಂದು ಪತ್ತೆಯಾದ 36 ಹೊಸ ಪ್ರಕರಣಗಳು ಸ್ಥಳೀಯವಾಗಿ ಹರಡಿರುವ ಸೋಂಕುಗಳೆಂದು ರಾಷ್ಟ್ರೀಯ ಆರೋಗ್ಯ ಆಯೋಗವು ತಿಳಿಸಿದೆ. ಈಶಾನ್ಯ ಚೀನಾದ ಲಿಯಾನೊಯಿಂಗ್ ಪ್ರಾಂತದಲ್ಲಿ ಇನ್ನೆರಡು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದು ಬೀಜಿಂಗ್‌ನಲ್ಲಿನ ಸೋಂಕಿತರ ಸಂಪರ್ಕದಿಂದ ಉಂಟಾಗಿದೆಯೆನ್ನಲಾಗಿದೆ.

ಶನಿವಾರ ಬೀಜಿಂಗ್‌ನಲ್ಲಿ ವರದಿಯಲ್ಲಿ ಕೊರೋನ ವೈರಸ್ ಸೋಂಕಿನ 9 ಪ್ರಕರಣಗಳಲ್ಲಿ ಸೋಂಕಿತರ್ಯಾರೂ ರೋಗ ಲಕ್ಷಣಗಳನ್ನು ಪ್ರದರ್ಶಿಸಿರಲಿಲ್ಲವೆಂದು ತಿಳಿದುಬಂದಿದೆ.

  ಬೀಜಿಂಗ್‌ನಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ರೋಗ ಹರಡುವುದನ್ನು ತಡೆಯಲು ಚೀನಾ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ. ಪ್ರವಾಸೋದ್ಯಮ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಶನಿವಾರ ರದ್ದುಪಡಿಸಲಾಗಿದೆ. ಬೀಜಿಂಗ್‌ನಲ್ಲಿ ವರದಿಯಾದ ನೋವೆಲ್ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ನಗರದ ಪ್ರಮುಖ ಸಗಟು ಮಾರುಕಟ್ಟೆಯ ಆಸುಪಾಸಿನಲ್ಲಿ ಕೇಂದ್ರೀಕೃತವಾಗಿರುವುದು, ಕೋವಿಡ್-19 ರೋಗದ ಎರಡನೆ ಅಲೆ ದೇಶದಲ್ಲಿ ಆರಂಭವಾಗಿದೆಯೆಂಬ ಭೀತಿಯನ್ನು ಸೃಷ್ಟಿಸಿದೆ.

11 ವಸತಿ ಸ್ಥಳಗಳ ಸೀಲ್ ಡೌನ್

 ಕೊರೋನ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬೀಜಿಂಗ್‌ನ ಸಗಟು ಮಾರುಕಟ್ಟೆಯ 11 ವಸತಿ ಸ್ಥಳಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಜನರು ಮನೆಯೊಳಗೆ ಉಳಿದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ನಗರದ ಆಹಾರ ಪೂರೈಕೆ ವ್ಯವಸ್ಥೆಯ ಸುರಕ್ಷತೆಯ ಬಗ್ಗೆಯೂ ಆತಂಕ ಮೂಡಿರುವ ಹಿನ್ನೆಲೆಯಲ್ಲಿ ಬೀಜಿಂಗ್‌ನ ಇತರ ಕೆಲವು ಮಾರುಕಟ್ಟೆಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಮಾರುಕಟ್ಟೆ ಸಮೀಪದ 9 ಶಾಲೆಗಳು ಹಾಗೂ ಶಿಶುವಿಹಾರಗಳನ್ನು ಕೂಡಾ ಮುಚ್ಚುಗಡೆಗೊಳಿಸಲಾಗಿದೆಯೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News