ಲಂಡನ್: ಬಿಳಿಯ ಜನಾಂಗೀಯವಾದಿಗಳ ಪ್ರತಿಭಟನೆ ವೇಳೆ ಹಿಂಸಾಚಾರ; ಹಲವಾರು ಪೊಲೀಸರಿಗೆ ಗಾಯ

Update: 2020-06-14 17:47 GMT

ಲಂಡನ್,ಜೂ.16: ಜನಾಂಗೀಯವಾದ ವಿರೋಧಿ ಹೋರಾಟಗಾರರ ವಿರುದ್ಧ ಲಂಡನ್‌ನಲ್ಲಿ ಶನಿವಾರ ಪ್ರದರ್ಶನ ನಡೆಸಿದ ಶ್ವೇತಜನಾಂಗೀಯವಾದಿ ಪ್ರತಿಭಟನಕಾರರು ಹಿಂಸಾಚಾರಕ್ಕಿಳಿದು, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಘಟನೆಯಲ್ಲಿ ಹಲವಾರು ಪೊಲೀಸರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

  ಜನಾಂಗೀಯವಾದದ ವಿರುದ್ಧ ಸಾವಿರಾರು ಮಂದಿ ಪ್ರತಿಭಟನಕಾರರು ಕೊರೋನ ವೈರಸ್ ನಿರ್ಬಂಧಗಳನ್ನು ಉಲ್ಲಂಘಿಸಿ, ಟ್ರಾಫಲ್ಗರ್ ಚೌಕದಲ್ಲಿ ಪ್ರತಿಭಟನೆ ನೆಡೆಸಿದರು. ಆನಂತರ ಬಿಳಿಯಜ ನಾಂಗೀಯವಾದಿಗಳು ಸಂಸತ್ ಭವನದ ಚೌಕದ ಸಮೀಪ ಜಮಾಯಿಸಿ ಪ್ರದರ್ಶನ ನಡೆಸಿದರು.

 ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯನ್ನು ಅರಿತ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಲು ಯತ್ನಿಸಿದರು.ಆಗ ಹಿಂಸಾಚಾರಕ್ಕಿಳಿದ ಪ್ರತಿಭಟನಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಬಾಟಲ್‌ಗಳು ಹಾಗೂ ಹೊಗೆ ಬಾಂಬ್‌ಗಳನ್ನು ಅಧಿಕಾರಿಗಳ ಮೇಲೆ ಎಸೆದರು. ಅಲ್ಲದೆ ಜನಾಂಗೀಯವಾದದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರ ಜೊತೆಗೂ ಘರ್ಷಣೆಗಿಳಿದಿರುವುದಾಗಿ ವರದಿಗಳು ತಿಳಿಸಿವೆ.

 ಹಿಂಸಾಚಾರಕ್ಕೆ ಸಂಬಂಧಿಸಿ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದಾಗಿ ಲಂಡನ್ ಪೊಲೀಸರು ತಿಳಿಸಿದ್ದಾರೆ. ಬಲಪಂಥೀಯ ಪ್ರತಿಭಟನಕಾರರ ಹಿಂಸಾಚಾರವನ್ನು ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ಖಂಡಿಸಿದ್ದು, ನಮ್ಮ ದೇಶದ ಬೀದಿಗಳಲ್ಲಿ ಜನಾಂಗೀಯವಾದಿ ಗೂಂಡಾಗಿರಿಗೆ ಜಾಗವಿಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News