ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‍ನ ಇಬ್ಬರು ಅಧಿಕಾರಿಗಳು ನಾಪತ್ತೆ

Update: 2020-06-15 06:57 GMT

ಹೊಸದಿಲ್ಲಿ: ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮಿಷನ್‍ನ ಇಬ್ಬರು ಭಾರತೀಯ ಅಧಿಕಾರಿಗಳು ಸೋಮವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದಾರೆ. ಈ ವಿಚಾರವನ್ನು ಭಾರತೀಯ ಹೈಕಮಿಷನ್ ಪಾಕ್ ಅಧಿಕಾರಿಗಳ ಗಮನಕ್ಕೆ ತಂದಿದೆ. ನಾಪತ್ತೆಯಾದವರು ಒಬ್ಬ ಸಿಐಎಸ್‍ಎಫ್ ಭದ್ರತಾ ಅಧಿಕಾರಿಯಾಗಿದ್ದರೆ, ಇನ್ನೊಬ್ಬರು ಚಾಲಕರಾಗಿದ್ದಾರೆ.

ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‍ನ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳ ವಿರುದ್ಧ ಗೂಢಚರ್ಯೆ ಆರೋಪ ಹೊರಿಸಿ ಅವರನ್ನು ಗಡೀಪಾರು ಮಾಡಿದ ಬೆನ್ನಲ್ಲೇ ಈ ಘಟನೆ  ನಡೆದಿದೆ.

ಭಾರತದ ಭದ್ರತೆ ಕುರಿತಂತೆ ಕೆಲ ಮಹತ್ವದ ಸ್ಥಳಗಳ ಕುರಿತಾದ ಸೂಕ್ಷ್ಮ ಮಾಹಿತಿಗಳಿರುವ ದಾಖಲೆಗಳನ್ನು  ಹಣ ನೀಡಿ ಭಾರತೀಯ ವ್ಯಕ್ತಿಯೊಬ್ಬನಿಂದ ಪಡೆಯುತ್ತಿರುವ ವೇಳೆ ಪಾಕ್ ಹೈಕಮಿಷನ್‍ನ ಇಬ್ಬರು ಅಧಿಕಾರಿಗಳಾದ ಮುಹಮ್ಮದ್ ತಾಹಿರ್ ಹಾಗೂ ಆಬಿದ್ ಹುಸೈನ್ ದಿಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಇಂತಹ ಪ್ರಕರಣ ನಡೆದಿರುವುದು ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ.

ಈ ಹಿಂದೆ ಅಕ್ಟೋಬರ್ 2016ರಲ್ಲಿ ಭಾರತ ಮತ್ತು ಪಾಕಿಸ್ತಾನ  ಪರಸ್ಪರರ ಹೈಕಮಿಷನ್‍ನ  ಅಧಿಕಾರಿಗಳನ್ನು ಗೂಢಚರ್ಯೆ ಆರೋಪದ ಮೇಲೆ  ಉಚ್ಛಾಟಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News