ಪಚ್ಚನಾಡಿ ಡಂಪಿಂಗ್ ಯಾರ್ಡ್ : ಮತ್ತೆ ಅಪಾಯದಲ್ಲಿ ಮಂದಾರ ?
ಮಂಗಳೂರು, ಜು.15: ಕಳೆದ ವರ್ಷ ಮಳೆಗಾಲದಲ್ಲಿ ಭಾರೀ ಮಳೆಗೆ ಪಚ್ಚನಾಡಿ ಡಂಪಿಂಗ್‌ಯಾರ್ಡ್‌ನಿಂದ ಟನ್ ಗಟ್ಟಲೆ ತ್ಯಾಜ್ಯ ಹರಿದು ತ್ಯಾಜ್ಯಮಯವಾಗಿದ್ದ ಮಂದಾರ ಮತ್ತೆ ಅಪಾಯದ ಜತೆಗೆ ಸಾಂಕ್ರಾಮಿಕ ರೋಗದ ತಾಣವಾಗುವ ಭೀತಿಯಲ್ಲಿದೆ.
ಪ್ರವಾಹದ ರೀತಿಯಲ್ಲಿ ಕಳೆದ ವರ್ಷ ತ್ಯಾಜ್ಯ ಹರಿದು ಕಸದ ರಾಶಿ ನಡುವೆ ತೋಟ, ದೈವಸ್ಥಾನ, ರಸ್ತೆಗಳೂ ಹುದುಗಿ ಹೋಗಿದ್ದು, ಅದರ ನಡುವೆ ಬೇಸಗೆಯಲ್ಲಿ ಅಲ್ಲಿಯೇ ಬದುಕು ಮುಂದುವರಿಸಿರುವ ಕುಟುಂಬಗಳಿಗಾಗಿ ಪರ್ಯಾಯ ರಸ್ತೆ ಕಲ್ಪಿಸಲಾಗಿತ್ತು. ಆದರೆ ಕಾಮಗಾರಿ ನಡೆಯುತ್ತಿದ್ದಂತೆಯೇ ಅಲ್ಲಿ ತ್ಯಾಜ್ಯದ ನೀರು ಒಸರಿದ ಕಾರಣ ಆ ರಸ್ತೆಯನ್ನು ಬಿಟ್ಟು ಪಕ್ಕದಲ್ಲೇ ಹೊಸ ರಸ್ತೆಯನ್ನೇನೋ ಮಾಡಲಾಗಿದೆ. ಆದರೆ ಹಳೆ ರಸ್ತೆಯಲ್ಲಿ ಸದ್ಯ ಸುರಿಯುತ್ತಿರುವ ಮಳೆಯ ನೀರು ತ್ಯಾಜ್ಯದ ನೀರಿನ ಜತೆ ಸೇರಿಕೊಂಡು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸು ವಂತಿದೆ. ಮಾತ್ರವಲ್ಲದೆ, ಈ ಬಾರಿಯೂ ಭಾರೀ ಮಳೆಗೆ ಮತ್ತಷ್ಟು ತ್ಯಾಜ್ಯ ರಾಶಿ ಕುಸಿದು ಕಸದ ರಾಶಿ ಮತ್ತೆ ಮುನ್ನುಗ್ಗಲ್ಪಟ್ಟಲ್ಲಿ ಮಂದಾರದಲ್ಲಿಯೇ ತಮ್ಮ ಬದುಕು ಮುಂದುವರಿಸಿರುವ ನಾಲ್ಕು ಮನೆಗಳವರಿಗೆ ಸಂಪರ್ಕ ವ್ಯವಸ್ಥೆಯೇ ಕಡಿದು ಹೋಗುವ ಭೀತಿಯೂ ಕಾಡುತ್ತಿದೆ.
ಮಂದಾರದಲ್ಲಿ ಸಂಪರ್ಕ ರಸ್ತೆಯೊಂದಿತ್ತು. ಆದರೆ, ತ್ಯಾಜ್ಯರಾಶಿ ಹರಡಿ ಆ ರಸ್ತೆ ಕಳೆದ ವರ್ಷ ಮುಚ್ಚಿದೆ. ಹೀಗಾಗಿ ಇಲ್ಲಿನವರಿಗೆ ಅತ್ತಿಂದಿತ್ತ ಹೋಗಲು ಪರ್ಯಾಯ ರಸ್ತೆ ಇರಲಿಲ್ಲ. ಖಾಸಗಿ ರಸ್ತೆಯನ್ನು ಆಶ್ರಯಿಸಬೇಕಾದರೂ ಅದರ ಅನುಮತಿ ಪಡೆಯುವ ಬಗ್ಗೆ ಜಿಲ್ಲಾಡಳಿತ/ಪಾಲಿಕೆ ಗಮನ ಹರಿಸದ ಕಾರಣ ಸದ್ಯ ಆ ರಸ್ತೆಯೂ ಅಲ್ಲಿಯೇ ನೆಲೆಸಿರುವ ನಾಲ್ಕು ಕುಟುಂಬಗಳಿಗೆ ಮುಚ್ಚಲ್ಪಟ್ಟಿದೆ. ಹೀಗಾಗಿ ಜನರಿಗೆ ಸಮಸ್ಯೆ ಆಗುವುದನ್ನು ಮನಗಂಡು ಇತ್ತೀಚೆಗೆ ತ್ಯಾಜ್ಯರಾಶಿಯ ಮೇಲೆಯೇ ಮಣ್ಣು ಹಾಕಿ ಕೊಂಚ ಡಾಮರು ಹಾಕಿ ತಾತ್ಕಾಲಿಕ ರಸ್ತೆ ಮಾಡಲಾಗಿದೆ. ದ್ವಿಚಕ್ರ, ಕಾರು, ಜೀಪು ಹೋಗಲು ಸದ್ಯಕ್ಕೇನು ಸಮಸ್ಯೆ ಇಲ್ಲ. ಆದರೆ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಇರುವ ಕಾರಣ ಮತ್ತೆ ಮಳೆಗೆ ಇಲ್ಲಿ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಅಳಿದುಳಿದ ತೋಟ, ಗದ್ದೆ, ತೋಡಿನಲ್ಲಿ ತ್ಯಾಜ್ಯ ನೀರು !
ಸದ್ಯ ನಿರ್ಮಾಣವಾಗಿರುವ ತಾತ್ಕಾಲಿಕ ರಸ್ತೆಯ ಪಕ್ಕ ಹಿಂದಿನ ರಸ್ತೆಗೆ ಈ ಬಾರಿ ಆರಂಭದಲ್ಲಿ ರಸ್ತೆ ನಿರ್ಮಾಣ ನಡೆಸಲಾಗಿತ್ತು. ಆದರೆ ಅಲ್ಲಿ ಕೊಳಚೆ ನೀರು ಒಸರುವುದು ಕಂಡು ಅದನ್ನು ಹಾಗೆಯೇ ಬಿಟ್ಟು ಹೊಸ ರಸ್ತೆ ಮಾಡಲಾಗಿದೆ. ಇದೀಗ ಹಾಗೆ ತೋಡಿನಂತೆ ಉಳಿದಿರುವ ಅದರಲ್ಲಿ ಮಳೆ ನೀರಿನ ಜತೆ ತ್ಯಾಜ್ಯ ನೀರು ಸಂಗ್ರಹವಾಗಿದೆ. ಭಾರೀ ಮಳೆಗೆ ಈ ನೀರು ಉಕ್ಕಿ ಹರಿಯುವ ಅಪಾಯವಿದೆ. ಇದೇ ವೇಳೆ ಅಲ್ಲಿ ಅಳಿದುಳಿದಿರುವ ತೋಟ, ಗದ್ದೆ, ತೋಡುಗಳಲ್ಲಿ ಮಳೆ ನೀರಿ ಜತೆ ಕಲುಷಿತ ನೀರು ಹರಿಯುತ್ತಿದೆ.
ಕಳೆದ ವರ್ಷದ ಭಾರೀ ಮಳೆ ಪ್ರವಾಹಕ್ಕೆ ಮಂದಾರದ ಜನರ ಬದುಕೇ ಜರ್ಝರಿತವಾಗಿತ್ತು. ಮಂದಾರದ ಒಟ್ಟು 27 ಕುಟುಂಬಗಳಿಗೆ ಸರಕಾರದ ನೆರವಿನೊಂದಿಗೆ ಫ್ಲಾಟ್‌ಗಳಲ್ಲಿ ವಸತಿ ಸೌಕರ್ಯ ಒದಗಿಸಲಾಗಿದ್ದು, ಬಹುತೇಕರು ಕೊರೋನ ಭೀತಿಯ ನಡುವೆ ಅಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಮಂದಾರದಲ್ಲಿರುವ ತಮ್ಮ ಮನೆ, ಕೃಷಿ ಬದುಕಿನಿಂದ ಮಾತ್ರ ಅವರು ದೂರವಾಗಿಲ್ಲ. ಕೆಲವೊಂದು ಸಂತ್ರಸ್ತರಿಗೆ ಈಗಾಗಲೇ ಕೃಷಿ ಪರಿಹಾರ ಸರಕಾರದಿಂದ ದೊರಕಿದೆ. ಶಾಶ್ವತ ಪರಿಹಾರದ ಕುರಿತಂತೆಯೂ ಚರ್ಚೆಗಳು ಮುಂದುವರಿದಿದೆ. ಈ ನಡುವೆಯೂ ನಾಲ್ಕು ಮನೆಗಳವರು ಅಲ್ಲಿಯೇ ತಮ್ಮ ಮನೆಗಳಲ್ಲಿ ಬದುಕು ಮುಂದುವರಿಸಿದ್ದಾರೆ. ತ್ಯಾಜ್ಯ ಹರಿದ ಎಡ ಪಾರ್ಶ್ವದಲ್ಲಿ ಈ ಮನೆ ಗಳಿರುವುದರಿಂದ ಅಲ್ಲಿಗೆ ಯಾವುದೇ ಅಪಾಯವಾಗದು ಎಂಬ ಲೆಕ್ಕಾಚಾರದಲ್ಲಿ ಆ ಕುಟುಂಬಗಳು ಅಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ ಭಾರೀ ಮಳೆಗೆ ತಮಗೆ ಕಲ್ಪಿಸಲಾಗಿರುವ ರಸ್ತೆ ಸಂಪರ್ಕ ವ್ಯವಸ್ಥೆ ಕಡಿದುಹೋಗುವ ಭೀತಿ ಮಾತ್ರ ಅವರನ್ನು ಕಾಡುತ್ತಿದೆ.
ಪಚ್ಚನಾಡಿ ಡಂಪಿಂಗ್‌ಯಾರ್ಡ್‌ನಿಂದ ಜರಿದು ಬಂದ ತ್ಯಾಜ್ಯರಾಶಿ ಕಳೆದ ವರ್ಷ ಆಗಸ್ಟ್‌ನಲ್ಲಿ ಮಂದಾರದ ಸುಮಾರು 2 ಕಿ.ಮೀ.ನಷ್ಟು ದೂರಕ್ಕೆ ಸರಿದಿದೆ. ಅದೂ ಕೂಡ 100 ಮೀಟರ್ ಅಗಲದಲ್ಲಿ. ವಿಶೇಷವೆಂದರೆ, 50 ಮೀ.ನಷ್ಟು ಎತ್ತರದಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ತ್ಯಾಜ್ಯ ರಾಶಿಯಿದೆ. ಒಂದು ಮನೆಯನ್ನೂ ಮೀರಿಸುವಷ್ಟು ಎತ್ತರದಲ್ಲಿ ತ್ಯಾಜ್ಯರಾಶಿ ಹೊರಳಿಕೊಂಡು ಹೋಗಿತ್ತು. ನಗರ ಪ್ರದೇಶದ ತ್ಯಾಜ್ಯ ಈಗಲೂ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಸುರಿಯಲಾಗುತ್ತಿದೆ. ದಿನವೊಂದಕ್ಕೆ ಕನಿಷ್ಠವೆಂದರೂ 350 ಟನ್ ಕಸ ಕಳೆದ ಒಂಭತ್ತು ತಿಂಗಳಿನಿಂದ ಶೇಖರಣೆ ಯಾಗುತ್ತಿದೆ. ಒಂದು ವೇಳೆ ಈ ಬಾರಿಯೂ ಮಳೆ ಪ್ರವಾಹ ಬಂದಲ್ಲಿ ಮತ್ತೆ ತ್ಯಾಜ್ಯ ಜಾರಿದ್ದಲ್ಲಿ ಮತ್ತಷ್ಟು ಅಪಾಯ ಸಂಭವಿಸಲಿದೆ. ಮಾತ್ರವಲ್ಲದೆ, ಮಂದಾರ ಗುಂಡಿಯ ನಿವಾಸಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.