ಉಡುಪಿ ಜಿಲ್ಲೆಯಲ್ಲಿ 44 ಮಿ.ಮೀ. ಮಳೆ, ಭಾರೀ ಮಳೆಯ ಮುನ್ಸೂಚನೆ
ಉಡುಪಿ, ಜೂ.15: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 44.30 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 56.5 ಮಿ.ಮೀ., ಕುಂದಾಪುರದಲ್ಲಿ 37.1ಮಿ.ಮೀ. ಹಾಗೂ ಕಾರ್ಕಳದಲ್ಲಿ 44.2ಮಿ.ಮೀ. ಮಳೆ ಬಿದ್ದ ಬಗ್ಗೆ ವರದಿ ಬಂದಿದೆ. ಜಿಲ್ಲೆಯ ಈ ದಿನದ ಸಾಮಾನ್ಯ ಮಳೆ 39.10ಮಿ.ಮೀ. ಆಗಿದೆ.
ಮುಂದಿನ 24ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ 50ರಿಂದ 65 ಮಿ.ಮೀ. ಮಳೆ ಸುರಿಯುವ ಸಾದ್ಯತೆ ಇದೆ. ಮುಂದಿನ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ನಿನ್ನೆ ಬಂದ ಗಾಳಿ-ಮಳೆಗೆ ಜಿಲ್ಲೆಯ ನಾನಾ ಕಡೆಗಳಲ್ಲಿ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬಂದಿವೆ. ಕಾಪು ತಾಲೂಕು ಪಡು ಗ್ರಾಮದ ರತ್ನ ಜೆ. ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು 50,000 ರೂ. ನಷ್ಟವಾಗಿದೆ. ಅದೇ ರೀತಿ ತಾಲೂಕಿನ ಹೆಜಮಾಡಿ ಗ್ರಾಮದ ಯತೀಶ್ ಎಂಬವರ ಮನೆಗೂ ಗಾಳಿ-ಮಳೆಯಿಂದ 80,000ರೂ.ಗಳಷ್ಟು ನಷ್ಟವಾಗಿದೆ.
ಇನ್ನು ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ಮೀನಕ್ಕಿ ಪೂಜಾರ್ತಿ ಎಂಬವರ ಮನೆಯ ದನದ ಕೊಟ್ಟಿಗೆ ಮಳೆಯಿಂದ ಭಾಗಶ: ಕುಸಿದಿದ್ದು ಇದರಿಂದ 20ಸಾವಿರ ರೂ.ನಷ್ಟವಾಗಿದೆ. 52 ಹೇರೂರು ಗ್ರಾಮದ ತಿಮ್ಮ ಪೂಜಾರಿ ಎಂಬವರ ವಾಸ್ತವ್ಯದ ಮನೆಗೂ 40,000ರೂ.ಗಳಷ್ಟು ಹಾನಿಯಾದ ಬಗ್ಗೆ ವರದಿಗಳು ಬಂದಿವೆ.