ಉಡುಪಿ: ಭೂಸುಧಾರಣೆ ತಿದ್ದುಪಡಿಗೆ ಕಿಸಾನ್ ಕಾಂಗ್ರೆಸ್ ಆಕ್ರೋಶ
ಉಡುಪಿ, ಜೂ.15: ಕರ್ನಾಟಕದ ಬಿಜೆಪಿ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂಸುಧಾರಣೆಯ ಕಾಯ್ದೆಯ ತಿದ್ದುಪಡಿ ರೈತರಿಗೆ ಬಹುದೊಡ್ಡ ಹೊಡೆತವಾಗಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಬಲವಾಗಿ ಒತ್ತಾಯಿಸಿದೆ.
ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಾರಂಭದಿಂದಲೂ ರೈತ ವಿರೋಧಿ ನೀತಿಯನ್ನೇ ಅನುಸರಿಸುತ್ತಿದ್ದು, ಇದು ಕೂಡ ಅದರದ್ದೆ ಮುಂದಿನ ಭಾಗವಾಗಿದೆಎಂದು ಆಕ್ರೋಶ ವ್ಯಕ್ತಪಡಿಸಿರುವ ಕಿಸಾನ್ ಕಾಂಗ್ರೆಸ್, ಕೇಂದ್ರದಲ್ಲಿ ಆರು ವರ್ಷಗಳ ಹಿಂದೆ ಅಧಿಕಾರ ಪಡೆದ ಮೋದಿ ಸರಕಾರ, ರೈತರ ಭೂಮಿ ಯನ್ನು ಕಂಪೆನಿಗಳಿಗೆ ನೀಡುವ ತಿದ್ದುಪಡಿ ಆದೇಶಕ್ಕೆ ಮೂರು ಬಾರಿ ಸುಗ್ರೀವಾಜ್ಞೆ ಯನ್ನು ತಂದು ರಾಜ್ಯಸಭೆಯಲ್ಲಿ ಬಹುಮತವಿಲ್ಲದೆ ಬಿದ್ದು ಹೋಗಿರುವುದನ್ನು ರೈತರು ಇನ್ನೂ ಮರೆತಿಲ್ಲಾ ಎಂದು ಹೇಳಿದೆ.
ಈಗಾಗಲೇ ರಾಜ್ಯ ಸರಕಾರ ಎಪಿಎಂಸಿ ಹಾಗೂ ಮೆಸ್ಕಾಂ ಇಲಾಖೆಗೆ ತಿದ್ದುಪಡಿಯನ್ನು ತಂದು ರೈತರಿಗೆ ಆಘಾತವನ್ನು ನೀಡಿಯಾಗಿದೆ. ಈಗ ರೈತರ ಭೂಮಿಯನ್ನು ಉದ್ಯಮಿಗಳು ಖರೀದಿಸುವಂತೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಈ ಕಾಯಿದೆ ಏನಾದರೂ ಜಾರಿಗೆ ಬಂದರೆ ನಮ್ಮ ಹಿರಿಯರು ಕಷ್ಟಪಟ್ಟು ನಿರ್ಮಾಣ ಮಾಡಿದ ಗದ್ದೆಗಳೇ ಇಲ್ಲದೆ ಹೋಗುವ ಸಂಭವವಿದೆ. ಬ್ರಿಟಿಷ ಸಹ ತಮ್ಮ ಅವಧಿಯಲ್ಲಿ ಭಾರತದ ಕೃಷಿಗೆ ತೊಂದರೆಯಾಗುವ ಯಾವುದೇ ಕಾಯ್ದೆಗಳನ್ನು ಜಾರಿಗೆ ತಂದಿರಲಿಲ್ಲ. ಆದರೆ ಜನರಿಂದಲೇ ಆಯ್ಕೆಯಾದ ನಮ್ಮ ಸರಕಾರ, ರೈತರ ಕಾನೆ, ಬಾನೆ, ಕೆರೆ, ಗೋಮಾಳ, ಕುಮ್ಕಿಗಳನ್ನು ಈಗಾಗಲೇ ರಾಜಕಾರಣಿಗಳಿಗೆ ದಾನ ಮಾಡಿಯಾಗಿದೆ. ಈಗ ಕೃಷಿ ಭೂಮಿಯನ್ನು ಕೂಡ ರಿಯಲ್ ಎಸ್ಟೇಟ್ ದಂಧೆಯವರ ಪಾಲಾಗುವ ಕಾಯ್ದೆಯನ್ನು ತರಲಾಗುತ್ತಿದೆ ಎಂದು ಕಿಸಾನ್ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.
ಖಂಡಿತವಾಗಿ ಇದು ಬಡವರಿಗೋಸ್ಕರ ಮಾಡಿದ ಕಾಯ್ದೆ ಅಲ್ಲ. ಇದು ಕಂದಾಯ ಸಚಿವ ಆರ್. ಆಶೋಕರ ರಿಯಲ್ ಎಸ್ಟೇಟ್ ಸಹೋದ್ಯೋಗಿ ಗಳಿಗಾಗಿ ಮಾಡಿದ ಕಾನೂನಾಗಿದೆ. ಇದರ ಹಿಂದೆ ಯಾವ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಎಲ್ಲಾ ರಾಜಕೀಯ ನಾಯಕರುಗಳಿಗೆ ಗೊತ್ತಿದೆ. ಆದ್ದರಿಂದ ರೈತರ ಭೂಮಿ ಕಸಿಯುವ ಕಾಯಿದೆಯನ್ನು ಜಾರಿಗೆ ತಂದಲ್ಲಿ ಕಿಸಾನ್ ಕಾಂಗ್ರೆಸ್ ಘಟಕ ಪಕ್ಷಭೇದವಿಲ್ಲದೆ ಎಲ್ಲಾ ರೈತರ ಪರವಾಗಿ ರಸ್ತೆಗಿಳಿದು ತೀವ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.