ಉಡುಪಿ: ಇಂದು ಇಬ್ಬರಲ್ಲಿ ಮಾತ್ರ ಕೊರೋನ ಸೋಂಕು ಪತ್ತೆ
ಉಡುಪಿ, ಜೂ.15: ಸೋಮವಾರ ಉಡುಪಿಯಲ್ಲಿ ಕೇವಲ ಇಬ್ಬರಲ್ಲಿ ಮಾತ್ರ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೋನ ವೈರಸ್‌ಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ 1028 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಸೋಂಕು ಪತ್ತೆಯಾದವರು ಇಬ್ಬರೂ ಮಹಿಳೆಯರು. ಇವರಲ್ಲಿ 51 ವರ್ಷ ಪ್ರಾಯದ ಮಹಿಳೆ ಎರಡು ದಿನಗಳ ಹಿಂದೆ ಮುಂಬೈಯಿಂದ ಬಂದಿದ್ದು, ಇಂದು ಅವರು ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಇನ್ನೊಬ್ಬರು ಜೂ.7ರಂದು ಸೋಂಕು ಪತ್ತೆಯಾದ ಮಣಿಪುರದ 30ರ ಹರೆಯದ ಲ್ಯಾಬ್ ಟೆಕ್ನಿಷಿಯನ್ ಅವರ 29ರ ಹರೆಯದ ಅತ್ತಿಗೆಯಾಗಿದ್ದಾರೆ. ಇವರಲ್ಲದೇ ಮಹಿಳೆಯ ಐದು ವರ್ಷದ ಗಂಡು ಮಗು ಮರುದಿನ ಪಾಸಿಟಿವ್ ಬಂದಿದ್ದರೆ, ಇವರ ಮಾವನಲ್ಲಿ ಜೂ.12ರಂದು ಸೋಂಕು ಪತ್ತೆಯಾಗಿತ್ತು. ಈ ಮೂಲಕ ಈ ಕುಟುಂಬದಲ್ಲಿ ಇದೀಗ ನಾಲ್ವರಿಗೆ ಸೋಂಕು ಪತ್ತೆಯಾದಂತಾಗಿದೆ.
ಜಿಲ್ಲೆಯಲ್ಲಿ ಇಂದು 11 ಮಂದಿ ಸೇರಿದಂತೆ ಒಟ್ಟು 820 ಮಂದಿ ಸೋಂಕಿ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಮವಾರ ಕುಂದಾಪುರದಿಂದ 9 ಮಂದಿ ಹಾಗೂ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ಇಬ್ಬರು ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ ಇಬ್ಬರು ಸೇರಿದಂತೆ ಇದೀಗ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಒಟ್ಟು 207 ಮಂದಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಮರು ಪಾಸಿಟಿವ್ ಬಂದ ಕೆಲವರು ಸೇರಿದ್ದಾರೆ. ಎಲ್ಲರನ್ನೂ ರೋಗದಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ -ಎರಡು ಬಾರಿ ನೆಗೆಟಿವ್- ಆಸ್ಪತ್ರೆ ಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಆತಂಕ ಬೇಡ: ಈಗ ಮಹಾರಾಷ್ಟ್ರ,ಮುಂಬಯಿ ಸೇರಿದಂತೆ ಹೊರರಾಜ್ಯ ಗಳಿಂದ ಮತ್ತೆ ಜನರು ಜಿಲ್ಲೆಗೆ ಬರುತಿದ್ದಾರೆ. ಆದರೆ ಇದರಿಂದ ಜಿಲ್ಲೆಯ ಜನತೆ ಆತಂಕ ಪಡಬೇಕಿಲ್ಲ. ಎಲ್ಲರನ್ನೂ ಹೋಮ್ ಕ್ವಾರಂಟೈನ್‌ನಲ್ಲಿರಿಸಿ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ನಮ್ಮ ಅಧಿಕಾರಿಗಳು, ಕಾರ್ಯಕರ್ತರು ದಿನದ 24 ಗಂಟೆಯೂ ಅವರ ಮೇಲೆ ನಿಗಾ ಇರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ನುಡಿದರು.
ಎಲ್ಲರ ಮನೆಯ ಸುತ್ತ ಪೊಲೀಸ್ ಟೇಪ್‌ಗಳನ್ನು ಹಾಕಲಾಗಿದ್ದು, ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿದಿನ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತಿದ್ದಾರೆ. ಮನೆಯವರನ್ನು ಹೊರತು ಪಡಿಸಿ ಉಳಿದ ಯಾರೂ ಆ ಮನೆಗೆ ಭೇಟಿ ನೀಡದಂತೆ ಮನವಿ ಮಾಡಿದ ಜಿಲ್ಲಾಧಿಕಾರಿ, ಆ ಮನೆಯಿಂದ ಯಾರೂ ಹೊರಗೆ ಬಾರದಂತೆ ನಿಗಾ ಇರಿಸುವಂತೆ ತಿಳಿಸಿದ್ದಾರೆ. ಯಾರಾದರೂ ಮನೆಯಿಂದ ಹೊರಗೆ ಬಂದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.