ಶಿರ್ವ ಸಮೀಪ ಜಗತ್ತಿನ ಬೃಹತ್ ಗಾತ್ರದ ‘ಅಟ್ಲಾಸ್ ಮೋತ್’ ಪತ್ತೆ

Update: 2020-06-15 15:08 GMT

ಶಿರ್ವ, ಜೂ.15: ಕಲ್ಲೊಟ್ಟಿ ಗ್ರಾಮದ ನೈಸರ್ಗಿಕ ನಾಗಬನದಲ್ಲಿ ಅಪರೂಪದ ದೈತ್ಯಾಕಾರದ ಪತಂಗ ‘ಅಟ್ಲಾಸ್ ಮೋತ್’ ಇಂದು ಪತ್ತೆಯಾಗಿದೆ.

ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಈ ಪತಂಗವನ್ನು ಗಮನಿಸಿ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಈ ಪತಂಗದ ವೈಜ್ಞಾನಿಕ ಹೆಸರು ಅಟ್ಟಾಕಾಸ್ ಅಟ್ಲಾಸ್. ಇದರ ರೆಕ್ಕೆಯ ವಿಸ್ತೀರ್ಣ 24 ಸೆ.ಮೀ. ಆಗಿದೆ.

ಈ ಪತಂಗ ಸ್ಥಳೀಯವಾಗಿ ಕಂಡುಬರುವ ಪೇರಳೆ, ಸಂಪಿಗೆ ಸೇರಿದಂತೆ ಕೆಲವೊಂದು ಸೀಮಿತ ಮರಗಳ ಎಲೆಗಳಲ್ಲಿ ಮೊಟ್ಟೆ ಇಡುತ್ತದೆ. ಬಳಿಕ ಮೊಟ್ಟೆ ಯಿಂದ ಹೊರ ಬರುವ ಹುಳ ಆ ಮರದ ಎಲೆಗಳನ್ನು ತಿಂದು ಕೋಶವನ್ನು ರಚಿಸುತ್ತದೆ. ಅದರಿಂದ ಹೊರಗೆ ಬರುವ ಗಂಡು ಪತಂಗವು, ಹೆಣ್ಣು ಪತಂಗ ದೊಂದಿಗೆ ಸೇರಿ ಸಾಯುತ್ತದೆ. ಮುಂದೆ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ.

ವಿಶೇಷ ಅಂದರೆ ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಆದುದರಿಂದ ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗ ಆದ ನಂತರ ಯಾವುದನ್ನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲ ಎನರ್ಜಿ ಯನ್ನು ಹುಳ ಆಗಿರುವಾಗಲೇ ಎಲೆಗಳನ್ನು ತಿಂದು ಇಟ್ಟುಕೊಳ್ಳುತ್ತದೆ. ಹಾಗಾಗಿ ಇದು ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ. ತನ್ನ ಎನರ್ಜಿಯನ್ನು ಉಳಿಸಿಕೊಳ್ಳಲು ಅದು ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಹೆಚ್ಚು ಸಮಯ ಎಲೆಯ ಮೇಲೆ ವಿಶ್ರಾಂತಿಯಲ್ಲಿರುತ್ತದೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಹಕ್ಕಿ, ಓತಿ, ಇರುವೆಗಳಿಗೆ ಆಹಾರವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News