ದ್ವಿತೀಯ ಪಿಯು ಪರೀಕ್ಷೆ : ಗಡಿನಾಡ ವಿದ್ಯಾರ್ಥಿಗಳಿಗೆ 30 ಉಚಿತ ಬಸ್ ವ್ಯವಸ್ಥೆ
ಮಂಗಳೂರು, ಜೂ.15: ಇದೇ ಜೂ.18ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ 51 ಕೇಂದ್ರಗಳಲ್ಲಿ 26,942 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ಪೈಕಿ 1,137 ವಿದ್ಯಾರ್ಥಿಗಳು ಗಡಿ ಪ್ರದೇಶ ಕಾಸರಗೋಡಿನಿಂದ ಜಿಲ್ಲೆಗೆ ಆಗಮಿಸಿ ಪರೀಕ್ಷೆ ಬರೆಯಲಿದ್ದಾರೆ.
ಪಿಯುಸಿ ಬೋರ್ಡ್ ನಿಯಮದಂತೆ ಮೂರು ಅಡಿ ಅಂತರದಲ್ಲಿ ಒಂದು ಬೆಂಚ್‌ನಲ್ಲಿ ಒಬ್ಬರು ವಿದ್ಯಾರ್ಥಿ ಪರೀಕ್ಷೆಗೆ ಬರೆಯಬೇಕಾಗಿದೆ. ಸಣ್ಣ ಕೊಠಡಿಯಲ್ಲಿ 12 ಮಂದಿ ಹಾಗೂ ದೊಡ್ಡ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಬಹುದು. ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಲು ಪಿಯು ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ. ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಸರಿಯಾಗಿ ಓದಿಕೊಂಡು ಬಳಿಕ ಉತ್ತರ ಬರೆಯಲು ಸಮಯಾವಕಾಶ ಕಲ್ಪಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರದ ಎದುರು ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಬರಬೇಕಾಗಿದೆ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಬಳಸಬೇಕು. ಮಾಸ್ಕ್ ಧರಿಸಿಕೊಂಡು ಬರದಿದ್ದರೆ, ಪರೀಕ್ಷಾ ಕೇಂದ್ರದಲ್ಲೂ ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವೈದ್ಯಕೀಯ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರತ್ಯೇಕ ನೋಡೆಲ್ ಅಧಿಕಾರಿ, ಉಸ್ತುವಾರಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳಲು ಇಲಾಖೆ ಪೂರ್ವ ತಯಾರಿ ನಡೆಸಿದೆ. ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಸುಮಾರು 30 ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಗಡಿನಾಡಿನ ವಿದ್ಯಾರ್ಥಿಗಳು ಜಿಲ್ಲೆಯ ಸುಮಾರು 20 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ವಿದ್ಯಾರ್ಥಿಗಳು ಮಂಗಳೂರಿನ ತಲಪಾಡಿ, ಬಂಟ್ವಾಳದ ಸಾರಡ್ಕ ಹಾಗೂ ಸುಳ್ಯದ ಜಾಲ್ಸೂರು ಚೆಕ್‌ಪೋಸ್ಟ್ ಮೂಲಕ ಜಿಲ್ಲೆಗೆ ಆಗಮಿಸಲಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಪಾಸ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಅಲ್ಲಿಂದ ಸರಕಾರಿ ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಉಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ಮಧ್ಯಾಹ್ನಕ್ಕೆ ಆಹಾರ ಹಾಗೂ ನೀರಿನ ಬಾಟಲಿಯನ್ನು ಮನೆಯಿಂದಲೇ ತೆಗೆದುಕೊಂಡು ಬರುವಂತೆ ಕಡ್ಡಾಯ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಿಯು ಇಲಾಖೆ ಉಪ ನಿರ್ದೇಶಕ ವಿಷ್ಣುಮೂರ್ತಿ ತಿಳಿಸಿದ್ದಾರೆ.
ಪಿಯು ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಕೂಡ ಎಂದಿನಂತೆ ಎಲ್ಲ ಗ್ರಾಮಾಂತರ ರೂಟ್‌ಗಳಲ್ಲಿ ಬಸ್ ಸಂಚಾರ ಕಲ್ಪಿಸಲಿದೆ. ಶಾಲಾ ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್‌ನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳು ಬಸ್‌ನಲ್ಲಿ ಸಂಚರಿಸಬಹುದು ಎಂದು ಮೂಲಗಳು ತಿಳಿಸಿವೆ.