ಅಮೆರಿಕ: 24 ಗಂಟೆಗಳಲ್ಲಿ 382 ಕೊರೋನ ಸಾವು; ವಾರಗಳಲ್ಲೇ ಕನಿಷ್ಠ

Update: 2020-06-15 16:25 GMT

ವಾಶಿಂಗ್ಟನ್, ಜೂ. 15: ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ 382 ಕೊರೋನ ವೈರಸ್ ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ರವಿವಾರದ ಅಂಕಿಸಂಖ್ಯೆಗಳು ಹೇಳಿವೆ.

ಇದು ಎಪ್ರಿಲ್ ಮಧ್ಯ ಭಾಗದಲ್ಲಿ ಸಾಂಕ್ರಾಮಿಕದ ತೀವ್ರತೆಯು ಉತ್ತುಂಗವನ್ನು ತಲುಪಿದ ಬಳಿಕ ದೇಶದಲ್ಲಿ ದಾಖಲಾಗಿರುವ ಕನಿಷ್ಠ ಒಂದು ದಿನದ ಸಾವಿನ ಸಂಖ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆ ದಿನಕ್ಕೆ 800ರ ಆಸುಪಾಸಿನಲ್ಲಿತ್ತು.

ಇದರೊಂದಿಗೆ ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ ಮೃತಪಟ್ವವರ ಒಟ್ಟು ಸಂಖ್ಯೆ 1,15,729ಕ್ಕೆ ಏರಿದೆ. ಅಲ್ಲಿ ಸೋಮವಾರ ಬೆಳಗ್ಗಿನ ವೇಳೆಗೆ ಒಟ್ಟು 21,06,000ಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿವೆ.

ಜಗತ್ತಿನ ಅತ್ಯಂತ ಆರ್ಥಿಕ ಬಲಾಢ್ಯ ದೇಶವಾಗಿರುವ ಅಮೆರಿಕವು ಕೊರೋನ ವೈರಸ್ ಸೋಂಕಿನ ತೀವ್ರ ದಾಳಿಗೆ ಸಿಲುಕಿದೆ. ಆದರೆ, ದೇಶದಲ್ಲಿ ಈಗಲೂ ಪ್ರತಿ ದಿನ ಸುಮಾರು 20,000 ಹೊಸ ಸೋಂಕು ಪ್ರಕರಣಗಳು ವರದಿಯಾಗತ್ತಿವೆ.

80 ಲಕ್ಷ ದಾಟಿದ ಜಾಗತಿಕ ಕೊರೋನ ವೈರಸ್ ಸೋಂಕು ಪ್ರಕರಣ

ಕೊರೋನ ವೈರಸ್ ಸೋಂಕು ಪ್ರಕರಣಗಳ ಜಾಗತಿಕ ಸಂಖ್ಯೆ ಸೋಮವಾರ 80 ಲಕ್ಷವನ್ನು ದಾಟಿದೆ. ಅದೇ ವೇಳೆ, ರೋಗದಿಂದ 41.3 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ ಸುಮಾರು 4,36,000 ಮಂದಿ ಮೃತಪಟ್ಟಿದ್ದಾರೆ.

ಜಗತ್ತಿನಲ್ಲಿ 34.3 ಲಕ್ಷ ಸಕ್ರಿಯ ಸೋಂಕು ಪ್ರಕರಣಗಳಿವೆ. ಈ ಪೈಕಿ 54,460 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಸುಮಾರು 8.67 ಲಕ್ಷದೊಂದಿಗೆ ಬ್ರೆಝಿಲ್ ಎರಡನೇ ಸ್ಥಾನದಲ್ಲಿದೆ. ಅಗ್ರ 10ರ ಪಟ್ಟಿಯಲ್ಲಿ ರಶ್ಯ, ಭಾರತ, ಬ್ರಿಟನ್, ಸ್ಪೇನ್, ಇಟಲಿ, ಪೆರು, ಜರ್ಮನಿ ಮತ್ತು ಇರಾನ್‌ಗಳು ಪರಸ್ಪರ ಸ್ಪರ್ಧಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News