×
Ad

ಮಂಗಳೂರು: ಮೀನುಗಾರಿಕೆಗೆ ರಜೆ ಆರಂಭ

Update: 2020-06-15 22:31 IST

ಮಂಗಳೂರು, ಜೂ.15: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಮೀನುಗಾರಿಕಾ ರಜೆಯು ಸೋಮವಾರದಿಂದ ಆರಂಭ ಗೊಂಡಿದೆ. ಅದರಂತೆ ಮಂಗಳೂರು ದಕ್ಕೆಯಲ್ಲಿ ಸಾವಿರಾರು ಬೋಟ್‌ಗಳು ಲಂಗರು ಹಾಕಿವೆ. ಈ ಮಧ್ಯೆ ಲಂಗರು ಹಾಕಲು ಸ್ಥಳಾವಕಾಶದ ಕೊರತೆಯಿಂದ ಬೋಟ್‌ಗಳ ಮಾಲಕರು ಎಂದಿನಂತೆ ಕಂಗಾಲಾಗಿದ್ದಾರೆ.

ಸಾಮಾನ್ಯವಾಗಿ ರಾಜ್ಯ ಸರಕಾರವು ಪಶ್ಚಿಮ ಕರಾವಳಿಯ ತೀರದಲ್ಲಿ ಜೂ.1ರಿಂದ ಜು.31ರವರೆಗೆ (61 ದಿನ) ಮೀನುಗಾರಿಕೆಗೆ ನಿಷೇಧ ಹೇರುತ್ತದೆ. ಆದರೆ, ಈ ಬಾರಿ ಕೊರೋನ-ಲಾಕ್‌ಡೌನ್ ಹಿನ್ನಲೆಯಲ್ಲಿ ಮಾ.22ರಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಕೆಲಸವಿಲ್ಲದೆ ಅತಂತ್ರರಾಗಿದ್ದ ಸಾವಿರಾರು ಕಾರ್ಮಿಕರು ಅದರಲ್ಲೂ ಹೊರ ರಾಜ್ಯದ ಕಾರ್ಮಿಕರು ತವರು ಸೇರಿದ್ದರು. ಈ ಮಧ್ಯೆ ಕೆಲವು ಷರತ್ತು ಗಳೊಂದಿಗೆ ಸರಕಾರ ಮೀನುಗಾರಿಕೆಗೆ ಅವಕಾಶ ನೀಡಿದರೂ ಕೂಡ ಕಾರ್ಮಿಕರ ಕೊರತೆಯಿಂದ ಮೀನುಗಾರಿಕೆಗೆ ಅಡಚಣೆ ಉಂಟಾಗಿತ್ತು. ಲಾಕ್‌ಡೌನ್ ಸಡಿಲಿಕೆಯ ಬಳಿಕ ಜೂ.14ರವರೆಗೆ ಮೀನುಗಾರಿಕೆ ನಡೆಸಲು ಸರಕಾರ ಅವಕಾಶ ಮಾಡಿಕೊಟ್ಟರೂ ಕೂಡ ಕೆಲವೇ ಕೆಲವು ಮಂದಿ ಮಾತ್ರ ಮೀನುಗಾರಿಕೆ ಮುಂದುವರಿಸಿದ್ದರು. ಹಾಗಾಗಿ ಕಡಲಿಗೆ ಇಳಿದಿದ್ದ ಮೀನುಗಾರರು ರವಿವಾರವೇ ಮರಳಿದ್ದಾರೆ.

ಆದರೆ 9.9 ಎಚ್‌ಪಿ ಇಂಜಿನ್ ಸಾಮರ್ಥ್ಯದ ದೋಣಿ ಬಳಸಿ ಅಂದರೆ ಸಮುದ್ರ ತೀರದಿಂದ ಸುಮಾರು 12 ನಾಟಿಕಲ್ ಮೈಲ್ ವ್ಯಾಪ್ತಿಯೊಳಗೆ ಮೀನುಗಾರಿಕೆ ಮಾಡಬಹುದು.ಅದಲ್ಲದೆ ‘ಕರೆ ಫಿಶ್ಶಿಂಗ್’ (ಕಡಲ ತೀರದ ಮೀನುಗಾರಿಕೆ)ನ್ನೂ ಕೂಡ ಮಾಡಬಹುದಾಗಿದೆ. ಕರೆ ಫಿಶ್ಶಿಂಗ್‌ನಿಂದ ಮೀನುಗಳ ಸಂಗ್ರಹ ಹೆಚ್ಚೇನು ಇರುವುದಿಲ್ಲ. ಅಲ್ಲದೆ ಖರ್ಚು ಜಾಸ್ತಿಯಾಗುವ ಕಾರಣ ಮೀನಿನ ದರವೂ ಜಾಸ್ತಿಯಾಗಿರುತ್ತದೆ.

ಜೂನ್-ಜುಲೈ ಮೀನುಗಳ ಸಂತಾನೋತ್ಪತ್ತಿಗೆ ಸಕಾಲವಾಗಿದೆ. ಈ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಮೀನುಗಳ ಸಂತತಿ ನಾಶಕ್ಕೆ ಯಾವುದೇ ಅಡ್ಡಿ ಇಲ್ಲ. ಇನ್ನು ಮಳೆಗಾಲದಲ್ಲಿ ಗಾಳಿ, ಮಳೆ, ಚಂಡಮಾರುತ, ಸಮುದ್ರಗಳ ಅಬ್ಬರದಿಂದ ಮೀನುಗಾರಿಕೆಗೆ ಹಾನಿಯಾಗುವ ಸಂಭವವೂ ಇದೆ. ಪ್ರಾಣ ಮತ್ತು ಆಸ್ತಿಗಳ ಹಾನಿಯ ಹಿನ್ನೆಲೆಯೂ ಮೀನುಗಾರಿಕೆಗೆ ನಿಷೇಧ ಹೇರಲು ಕಾರಣವಾಗಿದೆ.

ಮಂಗಳೂರು ದಕ್ಕೆಯಲ್ಲಿ ಸದ್ಯ ಗಿಲ್‌ನೆಟ್, ಟ್ರಾಲ್ ಮತ್ತು ಪರ್ಸಿನ್ ಬೋಟ್ ಸಹಿತ 3 ಸಾವಿರಕ್ಕೂ ಅಧಿಕ ದೋಣಿಗಳಿವೆ. ಮೀನುಗಾರಿಕೆಗೆ ನಿಷೇಧ ಹೇರಿದ್ದರಿಂದ ಬೋಟುಗಳನ್ನು ತೀರಾ ಹತ್ತಿರ ಹತ್ತಿರವಾಗಿ ಲಂಗರು ಹಾಕಲಾಗಿದೆ. ಬಿರುಗಾಳಿ ಬೀಸಿದಾಗ ಒಂದಕ್ಕೊಂದು ತಾಗಿ ಬೋಟ್‌ಗಳಿಗೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚಿದೆ. ರಜಾ ಅವಧಿಯಲ್ಲಿ ಬಹುತೇಕ ಮೀನುಗಾರರು ದೋಣಿಗಳ ದುರಸ್ತಿ, ಬಲೆ ತಯಾರಿಕೆ ಇತ್ಯಾದಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

10 ವರ್ಷದಿಂದ ನನೆಗುದಿಗೆ: ಬೋಟುಗಳನ್ನು ಲಂಗರು ಹಾಕಿಸುವ ಸಲುವಾಗಿ ಮಂಗಳೂರು ದಕ್ಕೆಯಲ್ಲಿ 3ನೆ ಹಂತದ ಕಾಮಗಾರಿಗೆ 2010 ರಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೆ ಸುಮಾರು 55 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಆದರೆ ಮೂಲಭೂತ ಸೌಕರ್ಯ ಕಲ್ಪಿಸ ಲಾಗಿಲ್ಲ. ಇನ್ನೂ ಸುಮಾರು 22 ಕೋ.ರೂ. ವೆಚ್ಚದ ಕಾಮಗಾರಿಯ ಪ್ರಸ್ತಾವ ಸರಕಾಕ್ಕೆ ಹೋಗಿವೆ. ಈ ಕಾಮಗಾರಿ ಪೂರ್ಣಗೊಂಡರೆ ಬೋಡುಗಳಿಗೆ ‘ಲಂಗರು’ ಹಾಕುವ ಸಮಸ್ಯೆ ದೂರವಾಗಲಿದೆ.

ಜುಲೈ 31ರವರೆಗೆ ನಿಷೇಧ

ಕೊರೋನ-ಲಾಕ್‌ಡೌನ್ ಮಧ್ಯೆಯೂ ಈ ಬಾರಿ ಅಂದರೆ 2019-20ನೆ ಸಾಲಿನಲ್ಲಿ 1.80,189 ಟನ್ ಮೀನು ಲಭ್ಯವಾಗಿದೆ. ಇದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಿಕ್ಕಿದ ಮೀನಿನ ಪ್ರಮಾಣಕ್ಕಿಂತ ಹೆಚ್ಚಳವಾಗಿದೆ. ಮಳೆಗಾಲದ ಸಂಭಾವ್ಯ ಅನಾಹುತದ ಹಿನ್ನೆಲೆಯಲ್ಲಿ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟು ಬೋಟ್ ಮೀನುಗಾರಿಕೆಗೆ ಜೂ.15ರಿಂದ ಜುಲೈ 31ರವರೆಗೆ ನಿಷೇಧ ಹೇರಲಾಗಿದೆ. ನಿಯಮ ಉಲ್ಲಂಘಿ ಸಿದವರ ವಿರುದ್ಧ ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಬಾರಿ ಮೀನುಗಾರಿ ಕೆಯ ರಜಾ ಅವಧಿಯು 47 ದಿನಗಳಿಗೆ ಸೀಮಿತಗೊಂಡಿವೆ.

- ಪಾರ್ಶ್ವನಾಥ, ಉಪನಿರ್ದೇಶಕರು
ಮೀನುಗಾರಿಕಾ ಇಲಾಖೆ, ದ.ಕ.ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News