×
Ad

ಎಂ.ಡಿ.ವೆಂಕಟೇಶ್ ಮಾಹೆಯ ನೂತನ ಕುಲಪತಿ

Update: 2020-06-16 21:31 IST

ಮಣಿಪಾಲ, ಜೂ.16: ಪ್ರಸ್ತುತ ಸಿಕ್ಕಿಂ-ಮಣಿಪಾಲ ವಿವಿಯಲ್ಲಿ ಕುಲಪತಿ ಯಾಗಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ ನೂತನ ಕುಲಪತಿಯಾಗಿ ಆಯ್ಕೆಯಾಗಿದ್ದಾರೆ.

ಡಾ.ವೆಂಕಟೇಶ್, ಜುಲೈ 1ರಂದು ನಿವೃತ್ತರಾಗಲಿರುವ ಹಾಲಿ ಕುಲಪತಿ ಡಾ. ಎಚ್.ವಿನೋದ್ ಭಟ್ ಅವರ ಸ್ಥಾನವನ್ನು ತುಂಬಲಿದ್ದು, ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂದು ಗುರುತಿಸಲ್ಪಟ್ಟಿರುವ ಮಾಹೆಯ ನೂತನ ಕುಲಪತಿಯಾಗಿ ಜು.1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಡಾ.ವಿನೋದ್ ಭಟ್ ಅವರನ್ನು ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ನೇಮಿಸಲಾಗಿದ್ದು, ಅವರೂ ಅಂದೇ ತನ್ನ ಅಧಿಕಾರವನ್ನು ವಹಿಸಿ ಕೊಳ್ಳಲಿದ್ದಾರೆ ಎಂದು ಮಾಹೆಯ ಕುಲಾಧಿಪತಿ ಡಾ.ರಾಮದಾಸ ಎಂ.ಪೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹೆಯ ಕುಲಪತಿಯಾಗಿ ಡಾ.ಎಂ.ಡಿ.ವೆಂಕಟೇಶ್ ಅವರನ್ನು ಆಯ್ಕೆ ಸಮಿತಿ ಹೆಸರಿಸಿದೆ ಎಂದು ಡಾ.ಪೈ ತಿಳಿಸಿದ್ದಾರೆ. ಡಾ.ವೆಂಕಟೇಶ್ 2017ರಿಂದ ಸಿಕ್ಕಿಂ-ಮಣಿಪಾಲ ವಿವಿಯ ಕುಲಪತಿಗಳಾಗಿ ಕಾರ್ಯನಿರ್ವಹಿಸುತಿದ್ದಾರೆ. ಅವರ ಅಧಿಕಾರಾವಧಿ ಜೂ.30ರಂದು ಮುಕ್ತಾಯ ಗೊಳ್ಳಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಡಾ.ವೆಂಕಟೇಶ್, 1978ರಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದು, ಸೇನೆಯ ವೈದ್ಯಕೀಯ ವಿಭಾಗವನ್ನು ಸೇರಿದ್ದರು. 1986ರಲ್ಲಿ ಮುಂಬಯಿ ವಿವಿಯಿಂದ ಇಎನ್‌ಟಿಯಲ್ಲಿ ಎಂಎಸ್ ಪದವಿ ಪಡೆದ ಇವರು ಕೊಕ್ಲಿಯರ್ ಇಂಪ್ಲಾಂಟೇಶನ್‌ನಲ್ಲಿ ದೇಶದ ನುರಿತ ವೈದ್ಯರೆಂದು ಖ್ಯಾತಿ ಪಡೆದಿದ್ದಾರೆ.

ಭಾರತೀಯ ಸೇನಾ ಪಡೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ 38 ವರ್ಷ ದುಡಿದ ಡಾ.ವೆಂಕಟೇಶ್, ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೂ ಅಪೂರ್ವ ಕೊಡುಗೆ ನೀಡಿದ್ದಾರೆ. ವೆಂಕಟೇಶ್ ಅವರ ಪತ್ನಿಯೂ ಪರಿಣಿತ ಶಿಕ್ಷಣ ತಜ್ಞೆಯಾಗಿದ್ದು, ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ಎಂದು ಮಾಹೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News