×
Ad

ಅಗಸ, ಕ್ಷೌರಿಕರು ಪರಿಹಾರ ನೆರವು ಸಭೆ: ಕುಟುಂಬದ ಒಬ್ಬರಿಗೆ ಮಾತ್ರ ಪರಿಹಾರ ಧನ- ಡಿಸಿ

Update: 2020-06-16 22:30 IST

ಮಂಗಳೂರು, ಜೂ.16: ಕುಟುಂಬವೊಂದರಲ್ಲಿ ಒಬ್ಬರಿಗಿಂತ ಹೆಚ್ಚು ಜನ ವೃತ್ತಿಯಲ್ಲಿ ತೊಡಗಿದ್ದಲ್ಲಿ ಒಬ್ಬರು ಮಾತ್ರ ಪರಿಹಾರ ಧನ ಪಡೆಯಲು ಅರ್ಹರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅಗಸ ಮತ್ತು ಕ್ಷೌರಿಕಗೆ ಪರಿಹಾರ ನೆರವು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಗಸ, ಕ್ಷೌರಿಕ ಕಾರ್ಮಿಕರಿಗೆ ವಿಶೇಷ ಧನಸಹಾಯ ನೀಡುವ ನಿಟ್ಟಿನಲ್ಲಿ ಅರ್ಹರು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಕೂಡಲೇ ಅರ್ಜಿ ಸಲ್ಲಿಸಬೇಕು ಎಂದರು.

ಬಿಪಿಎಲ್ ಕಾರ್ಡ್ ಹೊಂದಿರುವ ಹೊರ ರಾಜ್ಯ ಮತ್ತು ಅನ್ಯ ಜಿಲ್ಲಾ ಕಾರ್ಮಿಕರು ಸಹ ಸರಕಾರದಿಂದ ದೊರೆಯುವ 5,000 ರೂ. ನೆರವು ಪಡೆಯಬಹುದು. ಫಲಾನುಭವಿಗಳು ಅರ್ಜಿ ಭರ್ತಿ ಮಾಡಿ, ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವ ಆಧಾರ್ ಕಾರ್ಡ್, ವಿಳಾಸ ದೃಢೀಕರಣದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಸ್ವಯಂ ಘೋಷಣಾ ಪತ್ರ, ಉದ್ಯೋಗ ಪ್ರಮಾಣಪತ್ರ ಹಾಗೂ ಭಾವಚಿತ್ರ ಅಪ್‌ಲೋಡ್ ಮಾಡಬೇಕು.

ಕ್ಷೌರಿಕ, ಅಗಸ ವೃತ್ತಿ ನಿರ್ವಹಿಸುತ್ತಿರುವ ಕುರಿತು ಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ನ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ರು, ಉಪತಹಶೀಲ್ದಾರ್‌ರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ, ಕಾರ್ಮಿಕ ಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು ಇವರ ಪೈಕಿ ಯಾವುದೇ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವವರು ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಪರೀಶಿಲನೆ ನಡೆಸಿ ನಿಗದಿತ ಕಾಲಾಮಿತಿ ಒಳಗೆ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಯು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್, ಕಾರ್ಮಿಕ ಇಲಾಖೆ ಅಧಿಕಾರಿ ವಿಲ್ಮಾ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News