ಹಿರೇಬಂಡಾಡಿ ಯುವಕನಿಗೆ ಕೊರೋನ ಪಾಸಿಟಿವ್

Update: 2020-06-16 17:21 GMT

ಉಪ್ಪಿನಂಗಡಿ : ಹಿರೇಬಂಡಾಡಿ ಗ್ರಾಮದ ಯುವಕನೋರ್ವನಿಗೆ ಮಂಗಳವಾರ ಕೊರೋನಾ ಸೋಂಕು ದೃಢವಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಈತನ ಮನೆಗೆ ಭೇಟಿ ನೀಡಿ ಸೀಲ್‍ಡೌನ್ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದರು.

ಇಲ್ಲಿನ ಕೊಳ್ಳೆಜಾಲ್‍ನ 24ರ ಹರೆಯದ ಯುವಕನೋರ್ವನು ತೀವ್ರ ಜ್ವರದಿಂದಾಗಿ ಕಳೆದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿ ಆತನ ಗಂಟಲ ದ್ರವ ಪರೀಕ್ಷೆ ನಡೆಸಲಾಗಿತ್ತು. ಅದರ ವರದಿ ಇಂದು ಬಂದಿದ್ದು, ಆತನಿಗೆ ಕೊರೋನಾ ದೃಢಪಟ್ಟಿದೆ.

ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನಿಗೆ ಯಾವ ಮೂಲದಿಂದ ಕೊರೋನಾ ಬಂದಿದೆ ಎಂಬ ಬಗ್ಗೆ ಪತ್ತೆ ಕಾರ್ಯ ನಡೆಯುತ್ತಿದೆ. 15 ದಿನಗಳ ಹಿಂದೆ ಈತನಿಗೆ ಮೆದುಳು ಜ್ವರ ಬಂದಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು, ಗುಣಮುಖವಾಗಿ ಮನೆಗೆ ಬಂದಿದ್ದ ಎನ್ನಲಾಗಿದೆ. ಆದರೆ ಮತ್ತೊಮ್ಮೆ ಜ್ವರ ಬಂದ ಹಿನ್ನೆಲೆಯಲ್ಲಿ ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಈತನಿಗೆ ಕೊರೋನಾವಿರುವುದು ದೃಢವಾಗಿದೆ. 

ಅಧಿಕಾರಿಗಳ ಭೇಟಿ: ಈತನಿಗೆ ಕೊರೋನಾ ದೃಢಪಟ್ಟಿರುವ ಮಾಹಿತಿ ಪಡೆದು, ಆತನ ಕೊಳ್ಳೆಜಾಲ್‍ನ ಮನೆಗೆ ಭೇಟಿ ನೀಡಿದ ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ವಿಜಯವಿಕ್ರಮ್, ಹಿರೇಬಂಡಾಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಕೊೈಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜೀನಾ, ಆರೋಗ್ಯ ಸಹಾಯಕಿ ಶಾರದಾ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ, ಪೊಲೀಸ್ ಸಿಬ್ಬಂದಿ ಅಲ್ಲಿ ಸೀಲ್‍ಡೌನ್ ನಡೆಸುವ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರಲ್ಲದೆ, ಆತನ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯಿಂದ ಆದೇಶ ಬಂದ ಬಳಿಕ ಈ ಮನೆ ಹಾಗೂ ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಎರಡು ಮನೆಗಳನ್ನು  ಸೀಲ್‍ಡೌನ್‍ಗೆ ಒಳಪಡಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News