×
Ad

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ರೈತನನ್ನು ಕೃಷಿ ಕಾರ್ಮಿಕನಾಗಿಸುವ ಹುನ್ನಾರ: ವಿನಯ ರಾಜ್

Update: 2020-06-17 14:23 IST

ಮಂಗಳೂರು, ಜೂ.17: ಕರ್ನಾಟಕ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದು ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಖರೀದಿಸಲು ಸಹಕರಿಸಿ ರೈತನನ್ನು ಕೃಷಿ ಕಾರ್ಮಿಕರನ್ನಾಗಿಸುವ ಹುನ್ನಾರ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜ ಎ.ಸಿ. ವಿನಯ ರಾಜ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರು ಶಾಲು ಹೊದ್ದುಕೊಂಡು ರಾಜ್ಯದ ರೈತನ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಈ ಕಾಯಿದೆಯ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಡಲು ಮುಂದಾಗಿದೆ ಎಂದರು.

ಭೂ ಸುಧಾರಣಾ ಕಾಯ್ದೆಯ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಬಡ ಕುಟುಂಬಗಳು ಭೂ ಮಾಲಕತ್ವವನ್ನು ಪಡೆಯುವ ಮೂಲಕ ನೆಮ್ಮದಿಯ ಬಾಳನ್ನು ಕಂಡುಕೊಂಡಿದ್ದಾರೆ. ಆರ್ಥಿಕವಾಗಿಯೂ ಸಾಕಷ್ಟು ಸದೃಢರಾಗಿದ್ದಾರೆ. ಆದರೆ ತಿದ್ದುಪಡಿಯಿಂದ ಬಂಡವಾಳಶಾಹಿಗಳು ಮತ್ತು ಕಾರ್ಪೊರೇಟ್ ಕಂಪನಿಗಳು ಕೃಷಿ ಭೂಮಿ ಖರೀದಿಸಲು ಸಹಕಾರಿಯಾಗಲಿದೆ. ರಾಜ್ಯದಲ್ಲಿ ಅಂದಾಜು 75 ಲಕ್ಷ ರೈತ ಕುಟುಂಬಗಳಿವೆ. ಅವರಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆಯೇ 55 ಲಕ್ಷ. ಇವರು ಕಾರ್ಪೊರೇಟ್ ಕಂಪನಿಗಳಿಗೆ ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೃಷಿ ಜಮೀನನ್ನು ಕಾರ್ಪೊರೇಟ್ ಕಂಪನಿಗಳು ಖರೀದಿ ಮಾಡಿ ರೈತರನ್ನು ಭೂ ರಹಿತರನ್ನಾಗಿ ಮಾಡುವುದಲ್ಲದೆ, ಅವರ ಕೈಕೆಳಗೆ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುವಂತೆ ಮಾಡುವ ಎಲ್ಲಾ ಸಾಧ್ಯತೆಗಳು ಈ ತಿದ್ದುಪಡಿಯಿಂದ ಆಗಲಿದೆ ಎಂದು ಅವರು ಹೇಳಿದರು.

ಕಾರ್ಪೊರೇಟ್ ಕಂಪನಿಗಳು ಅಥವಾ ಬಂಡವಾಳಶಾಹಿಗಳು ಖರೀದಿ ಮಾಡಿದ ಭೂಮಿಯನ್ನು ಕೃಷಿ ಮಾಡದೆ ಬಂಜರು ಬಿಟ್ಟಲ್ಲಿ ಯಾವ ರೀತಿಯ ಕ್ರಮ ಸರಕಾರ ಕೈಗೊಳ್ಳಲಿದೆ ಎಂಬ ಬಗ್ಗೆ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದ ರೈತನಿಗೆ ಸರಿಯಾದ ಸಮಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದು, ಆಧುನಿಕ ಕೃಷಿ ಪದ್ಧತಿ ಅಳವಡಿಸಲು ಪ್ರೋತ್ಸಾಹ ನೀಡುವುದು, ನೀರಾವರಿ ಸೌಕರ್ಯ ಮೊದಲಾದ ಕಾರ್ಯಗಳನ್ನು ಮಾಡಿ ಕೃಷಿಕನ ಬೆನ್ನೆಲುಬಾಗಿ ನಿಲ್ಲಬೇಕಾದ ಸರಕಾರ ತಿದ್ದುಪಡಿಯ ಮೂಲಕ ಕಾರ್ಪೊರೇಟ್ ಕಂಪನಿಗಳು ಮತ್ತು ಬಂಡವಾಳಶಾಹಿಗಳು ಈ ಜಮೀನನ್ನು ಭೂ ಪರಿವರ್ತನೆ ಮಾಡಿ ಕೈಗಾರಿಕೆ ಮಾಡುವುದು ಅಥವಾ ರಿಯಲ್ ಎಸ್ಟೇಟ್ ದಂಧೆ ಮಾಡಲು ನೆರವು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಆಹಾರ ಉತ್ಪನ್ನಗಳಿಗೆ ತೊಂದರೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ನಾಣ್ಯದ ಎರಡು ಮುಖಗಳಿದ್ದಂತೆ. ಕಾರ್ಪೊರೇಟ್ ಕಂಪನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕೊರೋನದಿಂದ ರಾಜ್ಯ ತತ್ತರಿಸಿರುವ ಸಂದರ್ಭದಲ್ಲಿ ಎಪಿಎಂಸಿಗೆ ಕಾಯ್ದೆಗೆ ಚರ್ಚೆ ಮಾಡದೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರೈತರಿಗೆ ಕೊಡಲಿ ಏಟು ನೀಡಿರುವ ಸರಕಾರ ಇದೀಗ ಭೂ ಸುಧಾರಣಾ ಕಾಯ್ದೆಗೂ ಚರ್ಚೆ ಮಾಡದೆ ಸುಗ್ರೀವಾಜ್ಞೆಗೆ ಹೊರಟಿದೆ. ಬೀದಿಗಿಳಿದು ಪ್ರತಿಭಟನೆ ಮಾಡಲು ಸಾಧ್ಯವಾಗದ ಈ ಅಸಹಾಯಕ ಪರಿಸ್ಥಿತಿಯನ್ನು ಸರಕಾರ ಉಪಯೋಗಿಸಿಕೊಂಡಿದೆ. ಈ ತಿದ್ದುಪಡಿ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಹಿಂಪಡೆಯದಿದ್ದಲ್ಲಿ ಸದನದ ಒಳಗೆ ಹಾಗೂ ಹೊರಗೂ ಕಾಂಗ್ರೆಸ್ ರೈತರ ಪರ ಹೋರಾಟ ನಡೆಸಲಿದೆ ಎಂದವರು ಹೇಳಿದರು.

ಕೊರೋನದಿಂದಾಗಿ ಆರ್ಥಿಕವಾಗಿ ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಕಂದಾಯ ಆದಾಯ ಬರುತ್ತಿಲ್ಲ. ತಿದ್ದುಪಡಿ ಮೂಲಕ ಕೃಷಿ ಭೂಮಿಯನ್ನು ಖರೀದಿಗೆ ಅವಕಾಶ ಕಲ್ಪಿಸಿ ರಿಜಿಸ್ಟ್ರೇಶನ್ ಮೂಲಕ ಆದಾಯ ಸಂಗ್ರಹಕ್ಕೆ ಸರಕಾರ ಮುಂದಾಗಿರುವಂತಿದೆ. ಆದರೆ ಇದು ರೈತರ ಬಾಳಿಗೆ ಮರಣಶಾಸನವಾಗಲಿದೆ ಎಂದು ಜಿ.ಪಂ. ಸದಸ್ಯ ಶಾಹುಲ್ ಹಮೀದ್ ಹೇಳಿದರು.

ಗೋಷ್ಠಿಯಲ್ಲಿ ವಿಶ್ವಾಸ್ ಕುಮಾರ್ ದಾಸ್, ಟಿ.ಕೆ. ಸುಧೀರ್, ಸದಾಶಿವ ಶೆಟ್ಟಿ, ಉಮ್ಮರ್ ಫಾರೂಕ್, ಅನಿಲ್ ಕುಮಾರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News