×
Ad

ಜಾನುವಾರು ವ್ಯಾಪಾರಿ ಮೇಲಿನ ಹಲ್ಲೆ ಖಂಡಿಸಿ ಮನವಿ

Update: 2020-06-17 14:42 IST

ಮಂಗಳೂರು, ಜೂ.17: ಕಳೆದ ರವಿವಾರ ಉರ್ವ ಸ್ಟೋರ್ ಎಂಬಲ್ಲಿ ಹಾಡು ಹಗಲೇ ಸಂಘ ಪರಿವಾರದ ದುಷ್ಕರ್ಮಿಗಳು, ಜೋಕಟ್ಟೆಯ ಮುಹಮ್ಮದ್ ಹನೀಫ್ ಎಂಬ ಜಾನುವಾರು ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಮತೀಯ ಗಲಭೆ ಹುಟ್ಟು ಹಾಕುವ ಪ್ರಯತ್ನ ಎಂದು ಜೆಡಿಎಸ್‌ನ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಝೀಝ್ ಕುದ್ರೋಳಿ ಆರೋಪಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವ ರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿರುವ ಅಝೀಝ್ ಕುದ್ರೋಳಿ, ಮುಸ್ಲಿಮ್ ಸಮುದಾಯದ ಮುಂಬರುವ ಬಕ್ರೀದ್ ಹಬ್ಬವನ್ನು ನೆಪವಾಗಿ ಇಟ್ಟು ಕೊಂಡು ಸಂಘ ಪರಿವಾರ ಜಿಲ್ಲೆಯಲ್ಲಿ ಬೃಹತ್ ಮತೀಯ ಗಲಭೆ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿದೆ.

ದುಷ್ಕರ್ಮಿಗಳು ಮುಹಮ್ಮದ್ ಹನೀಫ್‌ರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವರನ್ನು ವಾಹನಕ್ಕೆ ಹಗ್ಗದಿಂದ ಕಟ್ಟಿ ಹಾಕಿ ತೀವ್ರವಾಗಿ ಥಳಿಸಿ, ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈ ಗೊಳ್ಳುವ ಬದಲು ಪೊಲೀಸರು ಹಲ್ಲೆಗೀಡಾದ ವ್ಯಾಪಾರಿಯ ಮೇಲೆ ಹಲವು ಸೆಕ್ಷನ್ ಗಳನ್ನು ಹಾಕಿ ಹಲ್ಲೆ ನಡೆಸಿದವರ ಮೇಲೆ ಜಾಮೀನು ಸಿಗುವ ಸೆಕ್ಷನ್ ಹಾಕಿರುವುದು ಸಂಶಯಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News