ಹುತಾತ್ಮ ಯೋಧ ಸಂತೋಷ್ ಬಾಬು ಜತೆಗಿನ ಕೊನೆಯ ದೂರವಾಣಿ ಸಂಭಾಷಣೆ ನೆನಪಿಸಿದ ಹೆತ್ತವರು
ಹೊಸದಿಲ್ಲಿ : ಪೂರ್ವ ಲಡಾಖ್‍ನಲ್ಲಿ ಸೋಮವಾರ ರಾತ್ರಿ ಚೀನಾ ಪಡೆಗಳ ಜತೆಗೆ ಘರ್ಷಣೆಯಲ್ಲಿ ಹುತಾತ್ಮರಾದ ಸೇನಾಧಿಕಾರಿ ಕರ್ನಲ್ ಸಂತೋಷ್ ಬಾಬು ಅವರಿಗೆ ಹೈದರಾಬಾದ್‍ಗೆ ವರ್ಗಾವಣೆಯಾಗಲಿತ್ತಾದರೂ ಲಾಕ್ ಡೌನ್‍ನಿಂದಾಗಿ ಈ ಪ್ರಕ್ರಿಯೆ ವಿಳಂಬಗೊಂಡಿತ್ತು. ರವಿವಾರವಷ್ಟೇ ಅವರು ತಮ್ಮ ಹೆತ್ತವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು.
ಸಂತೋಷ್ ಬಾಬು ಅವರ ಹೆತ್ತವರಾದ ಬಿ ಉಪೇಂದರ್ ಹಾಗು ಮಂಜುಳಾ ಪುತ್ರನ ಸಾವಿನಿಂದ ಆಘಾತಗೊಂಡಿದ್ದಾರೆ. ರವಿವಾರ ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಸಂತೋಷ್ ಗಡಿಯಲ್ಲಿನ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅದು ಸೂಕ್ಷ್ಮ ವಿಚಾರವಾದುದರಿಂದ ಅದರ ಬಗ್ಗೆ ಚರ್ಚಿಸುವುದು ಬೇಡ ಎಂದು ಹೇಳಿದ್ದರು ಎಂದು ನೆನಪಿಸುವ ಉಪೇಂದರ್ ಜಾಗರೂಕತೆಯಿಂದಿರುವಂತೆ ತಾವು ಸಲಹೆ ನೀಡಿದ್ದಾಗಿಯೂ ನೆನಪಿಸುತ್ತಾರೆ.
ಇದಕ್ಕೆ ಉತ್ತರಿಸಿದ್ದ ಸಂತೋಷ್, ಆತಂಕಪಡದಂತೆ ಹೆತ್ತವರಿಗೆ ಹೇಳಿದ್ದರಲ್ಲದೆ, ಮಾಧ್ಯಮದಲ್ಲಿ ವರದಿಯಾಗಿರುವಷ್ಟು ಕೆಟ್ಟ ವಾಸ್ತವ ಪರಿಸ್ಥಿತಿಯಿಲ್ಲ ಎಂದಿದ್ದರು. ಕಿರಿಯ ಸೋದರಿ ಹಾಗೂ ಮೈದುನನ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿದ್ದಾಗಿಯೂ ಅವರು ಹೆತ್ತವರಲ್ಲಿ ಹೇಳಿದ್ದರು.
ಕರ್ನಲ್ ಸಂತೋಷ್ ಬಾಬು ಅವರ ತಂದೆ ನಿವೃತ್ತ ಬ್ಯಾಂಕರ್ ಆಗಿದ್ದು ಸೇನೆ ಸೇರಬೇಕೆಂಬ ಹಂಬಲ ಈಡೇರಿರಲಿಲ್ಲ. ಆದುದರಿಂದ ಪುತ್ರ ಸೇನೆ ಸೇರಬೇಕೆಂದು ಅವರು ಪ್ರೋತ್ಸಾಹಿಸಿದ್ದರು.
“ನನಗೆ ದುಃಖವೂ ಆಗುತ್ತಿದೆ ಮಗನ ಬಗ್ಗೆ ಹೆಮ್ಮೆಯೂ ಇದೆ. ದೇಶಕ್ಕಾಗಿ ತನ್ನ ಪ್ರಾಣವನ್ನು ಆತ ಬಲಿದಾನಗೈದಿದ್ದಾನೆ. ತಾಯಿಯಾಗಿ ನನಗೆ ದುಃಖವಿದೆ ಆತ ನನ್ನ ಏಕೈಕ ಪುತ್ರ'' ಎಂದು ಮಂಜುಳಾ ನೋವಿನಿಂದ ಹೇಳಿದರು.
ಸಂತೋಷ್ ಬಾಬು ಅವರ ಪತ್ನಿ, ಎಂಟು ವರ್ಷದ ಪುತ್ರಿ ಹಾಗೂ ನಾಲ್ಕು ವರ್ಷದ ಪುತ್ರಿ ದಿಲ್ಲಿಯಲ್ಲಿ ವಾಸಿಸುತ್ತಿದ್ದಾರೆ