ಅಧಿಕಾರಿಗೆ ಚಪ್ಪಲಿಯೇಟು ನೀಡಿದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಬಂಧನ

Update: 2020-06-17 10:24 GMT

ಚಂಡೀಗಢ : ಹಿಸಾರ್ ಎಂಬಲ್ಲಿ ಸರಕಾರಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹಲ್ಲೆಗೈದ ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಸೋನಾಲಿ ಅವರು  ಹಿಸಾರ್ ನ ಬಲ್ಸಮಂದ್ ಪ್ರದೇಶದಲ್ಲಿ ಕೃಷಿ ಮಾರುಕಟ್ಟೆ ಸಮಿತಿ ಅಧಿಕಾರಿ ಸುಲ್ತಾನ್ ಸಿಂಗ್ ಅವರಿಗೆ ಚಪ್ಪಲಿಯೇಟು ನೀಡುತ್ತಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿತ್ತಲ್ಲದೆ, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯ ನಂತರ ಆಕೆಯ ವಿರುದ್ಧ ಹಿಸಾರ್ ಕೃಷಿ ಮಾರುಕಟ್ಟೆ ಸಮಿತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು.

ಟಿಕ್ ಟಾಕ್ ಸ್ಟಾರ್ ಕೂಡ ಆಗಿರುವ ಸೋನಾಲಿ ವೀಡಿಯೋದಲ್ಲಿ ಮೊದಲು ಅಧಿಕಾರಿಗೆ ಕಪಾಳಮೋಕ್ಷಗೈದು ನಂತರ ಎಲ್ಲರೂ ನೋಡುತ್ತಿದ್ದಂತೆಯೇ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ.

ತಾನು ಆಕೆಯ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಆದರೂ ವಿಧಾನಸಭಾ ಚುನಾವಣೆಯಲ್ಲಿ ಆಕೆಯನ್ನು ವಿರೋಧಿಸಿದ್ದೆ ಎಂಬ ತಪ್ಪು ಅಭಿಪ್ರಾಯದಿಂದಾಗಿ ಆಕೆ ಹಲ್ಲೆ ನಡೆಸಿದ್ದಾರೆಂದು  ಸಂತ್ರಸ್ತ ದೂರು ನೀಡಿದ್ದರು. ಆದರೆ ಅವರು ತನ್ನ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದಾರೆಂದು ಸೋನಾಲಿ ಕೂಡ ದೂರು ನೀಡಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರದಿಂದ ಸೋನಾಲಿ ಸ್ಪರ್ಧಿಸಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News