ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ
ಹೊಸದಿಲ್ಲಿ, ಜೂ.17: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಪಡೆಗಳೊಂದಿಗೆ ನಡೆಸಿದ ಸಂಘರ್ಷದಲ್ಲಿ ಮೃತಪಟ್ಟ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ದೇಶಕ್ಕೆ ಖಾತರಿಪಡಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಪ್ರಚೋದಿಸಿದರೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಮರ್ಥವಾಗಿದೆ ಎಂದವರು ಹೇಳಿದ್ದಾರೆ.
ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಪ್ರಚೋದಿಸಿದರೆ ಯಾವುದೇ ಪರಿಸ್ಥಿತಿಯಲ್ಲಿ ಸೂಕ್ತ ಇದಿರೇಟು ನೀಡಲೂ ಸಿದ್ಧ ಎಂಬ ಬಗ್ಗೆ ಯಾರಲ್ಲೂ ಅನುಮಾನ ಬೇಡ ಎಂದು ಪ್ರಧಾನಿ ಚೀನಾಕ್ಕೆ ಕಠಿಣ ಸಂದೇಶ ರವಾನಿಸಿದರು.
ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರಿಗೆ 2 ನಿಮಿಷ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಯಾವುದೇ ವಿಷಯದಲ್ಲಿ ಮನಸ್ತಾಪವು ವಿವಾದವಾಗಿ ಮಾರ್ಪಾಡಾಗಬಾರದು. ನಮಗೆ ದೇಶದ ಏಕತೆ ಮತ್ತು ಸಮಗ್ರತೆ ಅತ್ಯಂತ ಪ್ರಮುಖವಾಗಿದ್ದು ಈ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಸಮಯ ಬಂದಾಗ ನಮ್ಮ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇವೆ. ತ್ಯಾಗ ಮತ್ತು ಪುಟಿದೇಳಬಲ್ಲ ಗುಣ ನಮ್ಮ ರಾಷ್ಟ್ರೀಯ ಲಕ್ಷಣವಾಗಿದೆ. ಅದೇ ರೀತಿ, ಶೌರ್ಯ ಮತ್ತು ಪರಾಕ್ರಮ ಕೂಡಾ ಎಂದು ಪ್ರಧಾನಿ ಹೇಳಿದರು.