ಭಾರತ-ಚೀನಾ ಬಿಕ್ಕಟ್ಟು: ಲಡಾಖ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಇನ್ನೂ ನಾಲ್ವರ ಸ್ಥಿತಿ ಚಿಂತಾಜನಕ
ಹೊಸದಿಲ್ಲಿ,ಜೂ.17: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಿ ಸೈನಿಕರೊಂದಿಗೆ ನಡೆದಿದ್ದ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡಿದ್ದ ಇನ್ನೂ ನಾಲ್ವರು ಭಾರತೀಯ ಯೋಧರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಬುಧವಾರ ವರದಿ ಮಾಡಿದೆ.
ಈ ಘರ್ಷಣೆಯಲ್ಲಿ 20 ಯೋಧರು ಸಾವನ್ನಪ್ಪಿರುವುದನ್ನು ಭಾರತೀಯ ಸೇನೆಯು ಮಂಗಳವಾರ ದೃಢಪಡಿಸಿತ್ತು. ಇವು ಕಳೆದ 40 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಚೀನಿ ಗಡಿಯಲ್ಲಿ ಸಂಭವಿಸಿರುವ ಮೊದಲ ಸಾವುಗಳಾಗಿವೆ.
ಕಳೆದ ಮೇ ತಿಂಗಳಿನಲ್ಲಿ ಚೀನಿ ಸೈನಿಕರು ಎಲ್‌ಎಸಿಯುದ್ದಕ್ಕೂ ಹಲವಾರು ಕಡೆ ಭಾರತೀಯ ಭೂಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದಾಗಿನಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಲೇ ಇದೆ.
ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿವೆ ಎಂದು ಭಾರತ ಮತ್ತು ಚೀನಾಗಳ ಸೇನೆಗಳು ಹೇಳಿವೆ. ಆದರೆ ಚೀನಾದ ಎಷ್ಟು ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಆ ದೇಶದ ರಕ್ಷಣಾ ಸಚಿವಾಲಯವು ಬಾಯಿಬಿಟ್ಟಿಲ್ಲ.
ಸೋಮವಾರದ ಘಟನೆಗಾಗಿ ಉಭಯ ರಾಷ್ಟ್ರಗಳು ಪರಸ್ಪರರನ್ನು ದೂರಿವೆ.
ಪ್ರದೇಶದಲ್ಲಿಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾದ ಪ್ರಯತ್ನ ಸೋಮವಾರದ ಘಟನೆಗೆ ಕಾರಣವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆರೋಪಿಸಿದ್ದರೆ,ಭಾರತೀಯ ಯೋಧರು ಎರಡು ಬಾರಿ ಗಡಿಯನ್ನು ದಾಟಿದ್ದರು ಮತ್ತು ತನ್ನ ಸೈನಿಕರ ಮೇಲೆ ದಾಳಿಗಳನ್ನು ನಡೆಸಿದ್ದರು ಎಂದು ಚೀನಾದ ವಿದೇಶಾಂಗ ಸಚಿವಾಲಯವು ದೂರಿದೆ. ಯಾವುದೇ ಏಕಪಕ್ಷೀಯ ಕ್ರಮವನ್ನು ಕೈಗೊಳ್ಳದಂತೆ ಅದು ಭಾರತಕ್ಕೆ ಸೂಚಿಸಿದೆ.