×
Ad

ವೈದ್ಯರಿಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ: ದಿಲ್ಲಿ ಸರಕಾರಕ್ಕೆ ಸುಪ್ರೀಂ ತರಾಟೆ

Update: 2020-06-17 20:25 IST

ಹೊಸದಿಲ್ಲಿ, ಜೂ.17: ವಾಸ್ತವ ವಿಷಯವನ್ನು ಬಹಿರಂಗಗೊಳಿಸುವ ವೈದ್ಯರನ್ನು ನೀವು ಬೆದರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ದಿಲ್ಲಿ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

ದಿಲ್ಲಿಯ ಸರಕಾರಿ ಆಸ್ಪತ್ರೆಯೊಂದರ ಅವ್ಯವಸ್ಥೆಯನ್ನು ವೀಡಿಯೊ ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಕಾರಣಕ್ಕೆ ವೈದ್ಯರನ್ನು ಅಮಾನತುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ.

ಉತ್ತರ ದಿಲ್ಲಿಯ ಸರಕಾರಿ ಆಸ್ಪತ್ರೆಯೊಂದರ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಆ ಆಸ್ಪತ್ರೆಯ ವೈದ್ಯರೊಬ್ಬರು ವೀಡಿಯೊ ದಾಖಲೀಕರಿಸಿ ಅದನ್ನು ಪ್ರಸಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಎಫ್‌ಐಆರ್ ದಾಖಲಿಸಲಾಗಿದೆ. ನೀವು ಸಂದೇಶವಾಹಕರನ್ನು ಗುರಿಯಾಗಿಸಲು ಸಾಧ್ಯವಿಲ್ಲ. ಸತ್ಯವನ್ನು ಅಡಗಿಸಲಾಗದು. ವೈದ್ಯರಿಗೆ ಕಿರುಕುಳ ನೀಡುವುದನ್ನು , ಅವರ ವಿರುದ್ಧ ಎಫ್‌ಐಆರ್ ದಾಖಲಿಸುವುದನ್ನು ನಿಲ್ಲಿಸಿ. ಅವರು ತಮ್ಮ ಕರ್ತವ್ಯ ನಿರ್ವಹಿಸಲು ಬಿಡಿ. ಈಗಿನಿಂದಲೇ ಕಿರುಕುಳ ಅಂತ್ಯವಾಗುವುದನ್ನು ಖಾತರಿಪಡಿಸಬೇಕು ಎಂದು ನ್ಯಾಯಾಧೀಶರಾದ ಅಶೋಕ್ ಭೂಷಣ್, ಎಸ್‌ಕೆ ಕೌಲ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ ದಿಲ್ಲಿ ಸರಕಾರಕ್ಕೆ ಸೂಚಿಸಿತು.

ದಿಲ್ಲಿಯ ಆಸ್ಪತ್ರೆಗಳಲ್ಲಿ ಕೊರೋನ ವೈರಸ್ ರೋಗಿಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದ್ದು ಈ ಬಗ್ಗೆ ಗಮನ ಹರಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ , ದಿಲ್ಲಿ ಸರಕಾರಕ್ಕೆ ಈ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News