67 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ: ಬಿಜೆಪಿ ಮುಖಂಡನ ಸಹಿತ ಐವರ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ, ಜೂ.17: ಸರಕಾರಿ ಅಧೀನದ ಬ್ಯಾಂಕ್‌ಗೆ 67 ಕೋಟಿ ರೂ. ಮೊತ್ತ ವಂಚಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ಮೋಹಿತ್ ಕಾಂಬೋಜ್ ಸಹಿತ ಐದು ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ. ಈ ಹಗರಣದಲ್ಲಿ ಕೆಲವು ಬ್ಯಾಂಕ್ ಅಧಿಕಾರಿಗಳ ಪಾತ್ರವೂ ಇರುವ ಬಗ್ಗೆ ಸಂಶಯವಿದ್ದು ಈ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಸಿಬಿಐ ಮೂಲಗಳು ಹೇಳಿವೆ. ಮುಂಬೈ ಮೂಲದ ಅವ್ಯಾನ್ ಓವರ್‌ಸೀಸ್ ಪ್ರೈ.ಲಿ ಎಂಬ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಜಾಮೀನುಗಾರನಾಗಿರುವ ಮೋಹಿತ್ ಕಾಂಬೋಜ್( ಬಳಿಕ ತನ್ನ ಹೆಸರನ್ನು ಮೋಹಿತ್ ಭಾರತೀಯ ಎಂದು ಬದಲಿಸಿದ್ದರು) 2013ರಲ್ಲಿ ಬ್ಯಾಂಕ್ ಆಫ್ ಇಂಡಿಯಾದಿಂದ 60 ಕೋಟಿ ರೂ. ಸಾಲ ಪಡೆದಿದ್ದರು. ದೀರ್ಘಾವಧಿಯಿಂದ ಸಾಲ ಮರುಪಾವತಿಸದ ಕಾರಣ 2015ರ ಮಾರ್ಚ್‌ನಲ್ಲಿ ಕಂಪೆನಿಯ ಖಾತೆಯನ್ನು ಎನ್‌ಪಿಎ ವಿಭಾಗದಡಿ ಸೇರಿಸಲಾಗಿತ್ತು. ಈ ಮಧ್ಯೆ, ಒಂದು ಬಾರಿ ತೀರುವಳಿ(ಹಣ ಸಂದಾಯ) ವ್ಯವಸ್ಥೆಯಡಿ ನಡೆದ ಒಪ್ಪಂದದಂತೆ ತಾನು 2018ರಲ್ಲಿ 30 ಕೋಟಿ ರೂ. ಒಂದೇ ಕಂತಿನಲ್ಲಿ ಪಾವತಿಸಿದ ಹಿನ್ನೆಲೆಯಲ್ಲಿ ಸಾಲವನ್ನು ಇತ್ಯರ್ಥಪಡಿಸಲಾಗಿದೆ. 2019ರ ಮಾರ್ಚ್‌ನಲ್ಲಿ ಬ್ಯಾಂಕ್ ತನಗೆ ‘ನೋ ಡ್ಯೂ ಸರ್ಟಿಫಿಕೇಟ್’ ನೀಡಿದೆ ಎಂದು ಮೋಹಿತ್ ಹೇಳಿದ್ದಾರೆ. ಆದರೆ ಈ ಒಪ್ಪಂದದಲ್ಲಿ ಬ್ಯಾಂಕಿಗೆ ನಷ್ಟವಾಗಿದೆ. ಬ್ಯಾಂಕಿನ ಆಡಳಿತ ಸಮಿತಿ 30 ಕೋಟಿ ರೂ. ಸ್ವೀಕರಿಸಿ 37.22 ಕೋಟಿ ರೂ. ಸಾಲಮನ್ನಾ ಮಾಡಿರುವುದು ಸರಿಯಲ್ಲ. ಎನ್‌ಪಿಎ ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ಸಂಸ್ಥೆಯು ಹಣವನ್ನು ಅಕ್ರಮವಾಗಿ ಬೇರೆಡೆ ವಿನಿಯೋಗಿಸಲಾಗಿದೆ. ಬ್ಯಾಂಕಿನ ನಿರ್ದೇಶಕರೊಬ್ಬರ ಹೆಸರಿನಲ್ಲಿ ಫ್ಲ್ಯಾಟ್ ಖರೀದಿಸಿ ಅಜ್ಞಾತ ವ್ಯಕ್ತಿಗೆ ಹಣ ಸಂದಾಯ ಮಾಡಿರುವುದು ಆಂತರಿಕ ತನಿಖೆಯಿಂದ ತಿಳಿದು ಬಂದಿದೆ. ಈ ಅಕ್ರಮದಲ್ಲಿ ಬ್ಯಾಂಕಿನ ಕೆಲವು ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯಿದ್ದು ಬ್ಯಾಂಕ್‌ಗೆ 67.22 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಬ್ಯಾಂಕ್ ದೂರು ನೀಡಿದೆ.
ಬ್ಯಾಂಕ್ ನೀಡಿರುವ ದೂರಿನ ಆಧಾರದಲ್ಲಿ ಮೋಹಿತ್ ಕಂಬೋಜ್, ಅಭಿಷೇಕ್ ಕಪೂರ್ , ನರೇಶ್ ಕಪೂರ್, ಸಿದ್ಧಾಂತ್ ಬಗ್ಲಾ, ಇರ್ತೇಶ್ ಮಿಶ್ರಾ, ಮೆ/ ಅವ್ಯಾನ್ ಓವರ್‌ಸೀಸ್ ಪ್ರೈ. ಲಿ, ಮೆ/ ಕೆಬಿಜೆ ಹೋಟೆಲ್ಸ್ ಗೋವ ಪ್ರೈ.ಲಿ ಹಾಗೂ ಅಜ್ಞಾತ ಸರಕಾರಿ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಮೋಹಿತ್ ಕಂಬೋಜ್ ಬಿಜೆಪಿ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.