×
Ad

ಕುವೈತ್, ಯುಎಇ, ಮಸ್ಕತ್‌ನಲ್ಲಿ ಸಂಕಷ್ಟದಲ್ಲಿದ್ದ 422 ಅನಿವಾಸಿ ಕನ್ನಡಿಗರು ಮೂರು ವಿಮಾನಗಳಲ್ಲಿ ಮಂಗಳೂರಿಗೆ

Update: 2020-06-17 21:03 IST

ಮಂಗಳೂರು, ಜೂ.17: ಕುವೈತ್, ಯುಎಇ ಮತ್ತು ಮಸ್ಕತ್‌ನಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿರುವ ಒಟ್ಟು 422 ಮಂದಿ ಅನಿವಾಸಿ ಭಾರತೀಯರು ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮೂರು ವಿಮಾನಗಳಲ್ಲಿ ಮಂಗಳೂರಿಗೆ ಆಗಮಿಸಿದ್ದಾರೆ. ಸರಕಾರದ ಮಾರ್ಗ ಸೂಚಿಯಂತೆ ಅವರನ್ನು ನಗರದ ವಿವಿಧ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮೂರು ವಿಮಾನಗಳಲ್ಲಿ ಎರಡು ಖಾಸಗಿ ವಿಮಾನಗಳು. ಒಂದು ವಿಮಾನವು ಮಂಗಳವಾರ ತಡರಾತ್ರಿ ಯುಎಇಯಿಂದ 174 ಪ್ರಯಾಣಿಕ ರೊಂದಿಗೆ ಆಗಮಿಸಿದ್ದರೆ, ಇನ್ನೊಂದು ಬುಧವಾರ ಸಂಜೆ 168 ಪ್ರಯಾಣಿಕರನ್ನು ಹೊತ್ತು ಕುವೈತ್ ‌ನಿಂದ ಬಂದಿಳಿದಿದೆ. ವಿಮಾನ ವಂದೇ ಭಾರತ್ ಮಿಷನ್ ಅಡಿಯಲ್ಲಿ ಒಂದು ವಿಮಾನ ಮಸ್ಕತ್‌ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ 80 ಪ್ರಯಾಣಿಕರನ್ನು ಕರೆತಂದಿದೆ.

ಕುವೈತ್ ‌ನಿಂದ ಹೊರಟ 168 ಪ್ರಯಾಣಿಕರ ಈ ವಿಮಾನವು ಬುಧವಾರ ಸಂಜೆ 5 ಗಂಟೆಯ ವೇಳೆಗೆ ಮಂಗಳೂರಿಗೆ ಬಂದಿದೆ. 80 ಪ್ರಯಾಣಿಕರನ್ನು ಹೊತ್ತ ಮಸ್ಕತ್- ಬೆಂಗಳೂರು- ಮಂಗಳೂರು ವಂದೇ ಭಾರತ್ ಮಿಷನ್‌ನ ವಿಮಾನವು ಬುಧವಾರ ರಾತ್ರಿ 7:30ರ ವೇಳೆಗೆ ಆಗಮಿಸಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಯುಎಇಯ ಶಾರ್ಜಾದಿಂದ ಆಗಮಿಸಿದ 174 ಪ್ರಯಾಣಿಕರನ್ನೊಳಗೊಂಡ ಖಾಸಗಿ ವಿಮಾನದ ಖರ್ಚನ್ನು ಅಲ್ಲಿನ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ಮತ್ತು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಭರಿಸಿದ್ದಾರೆ. ಈ ವಿಮಾನದ ಪ್ರಯಾಣಿಕರು ಅವರ ಸಿಬ್ಬಂದಿ, ಕುಟುಂಬ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳಿದ್ದರು.

ಎಲ್ಲ ವಿಮಾನ ಪ್ರಯಾಣಿಕರನ್ನು ಆರಂಭಿಕ ಆರೋಗ್ಯ ತಪಾಸಣೆಯ ನಂತರ ಏಳು ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ವಿವಿಧ ಹೊಟೇಲ್‌ಗಳಿಗೆ ಕಳುಹಿಸಲಾಗಿದೆ. ಐದು ದಿನಗಳ ನಂತರ ಕೋವಿಡ್-19 ಪರೀಕ್ಷೆಗಾಗಿ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ದೇಶಗಳಿಂದ ಚಾರಿಟಿ ವಿಮಾನಗಳು ಆಗಮಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News