ಕಾರ್ಕಳದ ಕೊರೋನ ಸೋಂಕಿತೆಗೆ ಯಶಸ್ವಿ ಸಿಝೇರಿಯನ್ ಹೆರಿಗೆ
ಉಡುಪಿ, ಜೂ.17:ಮೂರು ದಿನಗಳ ಹಿಂದೆ ಕೋವಿಡ್-19ಕ್ಕೆ ಪಾಸಿಟಿವ್ ಕಂಡುಬಂದ ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿ ಇಂದು ತುರ್ತು ಸಿಝೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಗೆ ಒಳಗಾದರು. ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಿಸಿದ್ದಾರೆ.
ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ತುಂಬು ಗರ್ಭಿಣಿಯನ್ನು ಜೂ.16ರಂದು ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸೂತಿ ತೊಂದರೆ ಕಾರಣಗಳಿಗಾಗಿ ಇಂದು ಅವರಿಗೆ ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾ ಯಿತು. ತಾಯಿ ಚೇತರಿಸಿ ಕೊಳ್ಳುತಿದ್ದು, ನವಜಾತ ಶಿಶು ಆರೋಗ್ಯವಾಗಿದೆ ಎಂದು ಜಿಲ್ಲಾ ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ರೋಗಿಯೊಬ್ಬರಿಗೆ ನಡೆದ ಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ. ಪ್ರಸೂತಿ ಶಸ್ತ್ರಚಿಕಿತ್ಸಕರಾದ ಡಾ.ಶಶಿಕಲಾ ಕೆ.ಭಟ್ ಹಾಗೂ ಡಾ.ಸುರಬಿ ಸಿನ್ಹಾ ಮತ್ತು ಅರವಳಿಕೆ ತಜ್ಞ ಡಾ.ರೋಶನ್ ಶೆಟ್ಟಿ ಅವರ ತಂಡಕ್ಕೆ ವೆರೋನಿಕಾ, ಅಶ್ವಿನಿ ಹಾಗೂ ಜಯಶ್ರೀ ಅವರ ಶುಶ್ರೂಷಾ ತಂಡ ಸಹಾಯ ಮಾಡಿತ್ತು. ನವಜಾತ ಶಿಶುವಿನ ಆರೈಕೆಯನ್ನು ಡಾ.ಅಶಿಶ್ ಗುಪ್ತಾ ಹಾಗೂ ಡಾ.ಚೈತನ್ಯ ನೋಡಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಡಾ.ಟಿಎಂಎ ಪೈ ಆಸ್ಪತ್ರೆಯ ತಜ್ಞ ವೈದ್ಯ ರನ್ನು ಅಭಿನಂದಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ನವಜಾತ ಶಿಶುವಿಗೆ ಪಾಸಿಟಿವ್ ಬರದಂತೆ ಎಲ್ಲಾ ರೀತಿಯ ಎಚ್ಚರ ವಹಿಸುವಂತೆ ವೈದ್ಯರಿಗೆ ಅವರು ಸಲಹೆ ನೀಡಿದ್ದಾರೆ. ಮಗುವಿಗೆ ಐದು ದಿನಗಳ ಬಳಿಕ ಕೋವಿಡ್ ಟೆಸ್ಟ್ ನಡೆಸಿದರೆ, ತಾಯಿಗೆ ಜೂ.22ರಂದು ಸ್ಯಾಂಪಲ್ ಟೆಸ್ಟ್ ನಡೆಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ವಿವರಿಸಿವೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಗೆ ಸಂಬಂಧಿಸಿದ ಆಸ್ಪತ್ರೆಯಾದ ಡಾ.ಟಿಎಂಎ ಪೈ ಆಸ್ಪತ್ರೆ ಕಳೆದ ಎಪ್ರಿಲ್ ಮೊದಲ ದಿನದಿಂದ ಕೋವಿಡ್-19ಕ್ಕೆ ಮೀಸಲಾದ ಆಸ್ಪತ್ರೆಯಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಸೇರಿದಂತೆ ಇಲ್ಲಿ ಎಲ್ಲಾ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.