ಕುವೈತ್‌ನಲಿ ಅಗ್ನಿದುರಂತ : ಪಡೀಲ್‌ನಲ್ಲಿ ಕಾರ್ಮಿಕನ ಮೃತದೇಹ ಅಂತ್ಯಸಂಸ್ಕಾರ
ಮಂಗಳೂರು, ಜೂ.17: ಕುವೈತ್ ನಲ್ಲಿ ಕಳೆದ ರವಿವಾರ ನಡೆದ ಅಗ್ನಿದುರಂತದಲ್ಲಿ ಸಾವನ್ನಪ್ಪಿದ ಮಂಗಳೂರಿನ ಪಡೀಲ್-ಕೊಡಕ್ಕಲ್ ನಿವಾಸಿ ಸತೀಶ್ ಕೋಚು ಶೆಟ್ಟಿ (45) ಅವರ ಮೃತ ದೇಹವನ್ನು ಬುಧವಾರ ಸಂಜೆ ಆಗಮಿಸಿದ ವಿಮಾನದಲ್ಲಿ ನಗರಕ್ಕೆ ತರಿಸಲಾಗಿದ್ದು, ಬಳಿಕ ಅಂತ್ಯ ಕ್ರಿಯೆ ನೆರವೇರಿತು.
ಸಂಜೆ 5:15ಕ್ಕೆ ಬಂದಿಳಿದ ವಿಮಾನದಲ್ಲಿ ಬಂದಿದ್ದ ಮೃತ ದೇಹವನ್ನು ಮನೆಗೆ ಕೊಂಡೊಯ್ದು ಬಳಿಕ ಶಕ್ತಿನಗರದ ಸ್ಮಶಾನದಲ್ಲಿ ಅಂತ್ಯವಿಧಿ ನೆರವೇರಿಸಲಾಯಿತು ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.
ಕುವೈತ್ ನ ಆಯಿಲ್ ಆ್ಯಂಡ್ ಗ್ಯಾಸ್ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದ ಸತೀಶ್ ಕೋಚು ಶೆಟ್ಟಿ ಅವರು ಜೂ.11ರಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಅನಿಲ ಬಿಡುಗಡೆಯಾಗಿ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿತ್ತು. ತೀವ್ರ ಸುಟ್ಟ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಜೂ.14ರಂದು ಸಾವನ್ನಪ್ಪಿದ್ದರು.
ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್‌ನ ಮ್ಯಾಗ್ನೆಟ್ ತಂಡದ ಕರ್ನಾಟಕ ಶಾಖೆಯ ಪದಾಧಿಕಾರಿಗಳು ಮೃತದೇಹವನ್ನು ತ್ವರಿತವಾಗಿ ಮಂಗಳೂರಿಗೆ ತರಿಸಲು ಸಹಕಾರ ನೀಡಿದ್ದರು.