ಭಾರೀ ಮಳೆ: ಸುಜ್ಲಾನ್ ಆವರಣಗೋಡೆ ಕುಸಿತ

Update: 2020-06-17 17:31 GMT

ಪಡುಬಿದ್ರಿ: ಸುಜ್ಲಾನ್ ಕಂಪೆನಿಗೆ ಸೇರಿದ ಆವರಣಗೋಡೆ ಬುಧವಾರ ಸುರಿದ ಮಳೆಗೆ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಯಿತು.

ನಡ್ಸಾಲು ಗ್ರಾಮದಲ್ಲಿ ಸುಜ್ಲಾನ್ ಕಂಪೆನಿಗೆ ನೀಡಲಾದ 600 ಎಕ್ರೆ ಭೂಪ್ರದೇಶದ ಸುತ್ತಲೂ ಆವರಣಗೋಡೆ ನಿರ್ಮಿಸಲಾಗಿದೆ. ಪಡುಬಿದ್ರಿ ಬೀಡು ಸಮೀಪದ ಅವರಾಲು ಮಟ್ಟು ರಸ್ತೆಯಲ್ಲಿರುವ ಅಂಡರ್‍ಪಾಸ್ ಬಳಿ ಭಾರೀ ಮಳೆಯ ಕಾರಣದಿಂದಾಗಿ ಸಾರ್ವಜನಿಕ ರಸ್ತೆಯ ಮೇಲೆ ಕುಸಿದು ಬಿದ್ದಿದೆ. ಇದರಿಂದ ಈ ಪರಿಸರದಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು.

ಗೋಡೆ ಕುಸಿದು ರಸ್ತೆ ತಡೆಯಾದ ವಿಚಾರ ತಿಳಿದ ಕೂಡಲೇ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಿಸಿಬಿ ಯಂತ್ರದ ಮೂಲಕ ತುರ್ತಾಗಿ ರಸ್ತೆಯಲ್ಲಿದ್ದ ಕಲ್ಲು ಮಣ್ಣು ತೆರವುಗೊಳಿಸಿದರು. ಆದರೆ ರಭಸದಿಂದ ಹರಿದು ಬರುವ ಮಳೆ ನೀರು ರಸ್ತೆಗೆ ಬಿದ್ದು ಕೆಂಪು ಮಣ್ಣಿನೊಂದಿಗೆ ಮಿಶ್ರಣಗೊಂಡು ರಸ್ತೆ ಸಂಪೂರ್ಣ ಕೆಸರುಮಯ ವಾಗಿ ನಡೆದಾಡಲು ಆಗದ ಪರಿಸ್ಥಿತಿ ನಿರ್ಮಾಣವಾಯಿತು.

ಹಲವು ವರ್ಷಗಳಿಂದ ಈ ಭಾಗದಲ್ಲಿ ಇಂತಹ ಸಮಸ್ಯೆಗಳು ಕಂಡು ಬರುತ್ತಿದ್ದು, ಯೋಜನೆಯ ಸುತ್ತ ನಿರ್ಮಿಸಲಾದ ಆವರಣ ಗೋಡೆ ಅಲ್ಲಲ್ಲಿ ಶಿಥಿಲಗೊಂಡಿದೆ. ಇದರಿಂದಾಗಿ ಆವರಣ ಗೋಡೆಯ ಪಕ್ಕದಲ್ಲೇ ಸಾಗುವ ಸಂಚಾರಿಗಳು ಸ್ಥಳೀಯ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಸುಜ್ಲಾನ್ ಭೂ ಪ್ರದೇಶದೊಳಗೆ ಮಳೆಯ ನೀರು ಅಲ್ಲಲ್ಲಿ ಆವರಣಗೋಡೆಯ ಬಳಿಯೇ ಶೇಖರಣೆಯಾಗುತ್ತಿದ್ದು ಈಗಾಗಲೇ ಹಲವೆಡೆಗಳಲ್ಲಿ ಇದು ಶಿಥಿಲಗೊಂಡಿವೆ. ವಾಲಿ ನಿಂತಿದೆ. ಮಳೆ, ಗಾಳಿಯ ಭೀಕರತೆಯನ್ನು ಅನುಸರಿಸಿ ಮುಂದೆಯೂ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News