ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ವಿರೋಧಿಸಿ ಚೀನಾಗೆ ನಿರ್ಬಂಧದ ಎಚ್ಚರಿಕೆ: ಮಸೂದೆಗೆ ಸಹಿ ಹಾಕಿದ ಟ್ರಂಪ್
ವಾಶಿಂಗ್ಟನ್, ಜೂ. 18: ಚೀನಾದ ಉಯಿಘರ್ ಮುಸ್ಲಿಮರ ಸಾಮೂಹಿಕ ಬಂಧನಕ್ಕೆ ಸಂಬಂಧಿಸಿ ಚೀನಾ ಅಧಿಕಾರಿಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದು, ಅದು ಈಗ ಕಾನೂನಾಗಿ ಪರಿವರ್ತನೆಗೊಂಡಿದೆ.
ಉಯಿಘರ್ ಮಾನವ ಹಕ್ಕುಗಳ ಕಾಯ್ದೆಯನ್ನು ಅಮೆರಿಕದ ಸಂಸತ್ತು ಕಾಂಗ್ರೆಸ್ ಬಹುತೇಕ ಅವಿರೋಧವಾಗಿ ಅಂಗೀಕರಿಸಿದ ಬಳಿಕ ಟ್ರಂಪ್ ಅದಕ್ಕೆ ಸಹಿ ಹಾಕಿದ್ದಾರೆ. ಕಾಯ್ದೆಗೆ ಅಂಗೀಕಾರ ನೀಡುವ ವೇಳೆ, ಅಲ್ಪಸಂಖ್ಯಾತರನ್ನು ಚೀನಾ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.
‘‘ಚೀನಾದ ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತರ ಜನಾಂಗೀಯ ಅಸ್ತಿತ್ವ ಮತ್ತು ಧಾರ್ಮಿಕ ನಂಬಿಕೆಗಳನ್ನು ಅಳಿಸಿಹಾಕುವುದಕ್ಕಾಗಿ ಅವರನ್ನು ಆಕ್ರಮಣಕಾರಿ ಕಣ್ಗಾವಲಿಗೆ ಒಳಪಡಿಸುವುದು, ಬಲವಂತದ ಜೀತಕ್ಕೆ ತಳ್ಳುವುದು ಹಾಗೂ ಸಿದ್ಧಾಂತಗಳನ್ನು ಬಲವಂತವಾಗಿ ಮನಸ್ಸಿಗೆ ತುಂಬುವ ಶಿಬಿರಗಳಲ್ಲಿ ಅವರನ್ನು ಕೂಡಿ ಹಾಕುವುದು ಮುಂತಾದ ಮಾನವಹಕ್ಕು ಉಲ್ಲಂಘನೆಗಳು ಮತ್ತು ಶೋಷಣೆಗಳನ್ನು ಮಾಡುವವರನ್ನು ಈ ಕಾನೂನು ಉತ್ತರದಾಯಿಯಾಗಿಸುತ್ತದೆ’’ ಎಂದು ಟ್ರಂಪ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಉಯಿಘರ್‌ಗಳು ಮತ್ತು ಇತರ ಅಲ್ಪಸಂಖ್ಯಾತರ ಸ್ವೇಚ್ಛಾಚಾರದ ಬಂಧನ, ಅವರಿಗೆ ನೀಡಲಾಗುವ ಚಿತ್ರಹಿಂಸೆ ಮತ್ತು ಕಿರುಕುಳಕ್ಕೆ ಚೀನಾದ ಯಾವ ಅಧಿಕಾರಿಗಳು ಕಾರಣ ಎನ್ನುವುದನ್ನು ನಿರ್ಧರಿಸಲು ಅಮೆರಿಕ ಸರಕಾರಕ್ಕೆ ಈ ಕಾನೂನು ಅಧಿಕಾರ ನೀಡುತ್ತದೆ. ಬಳಿಕ, ಆ ಅಧಿಕಾರಿಗಳು ಅಮೆರಿಕದಲ್ಲಿ ಯಾವುದೇ ಸೊತ್ತುಗಳನ್ನು ಹೊಂದಿದ್ದರೆ ಅವುಗಳನ್ನು ಮುಟ್ಟುಗೋಲು ಹಾಕುತ್ತದೆ ಹಾಗೂ ಅವರು ಅಮೆರಿಕಕ್ಕೆ ಪ್ರಯಾಣಿಸುವುದನ್ನು ನಿಷೇಧಿಸುತ್ತದೆ.
ಇದರ ಪರಿಣಾಮವನ್ನು ಅಮೆರಿಕ ಅನುಭವಿಸಲಿದೆ: ಚೀನಾ
ಉಯಿಘರ್ ಮುಸ್ಲಿಮರ ಸಾಮೂಹಿಕ ಬಂಧನಕ್ಕಾಗಿ ಚೀನೀ ಅಧಿಕಾರಿಗಳ ವಿರುದ್ಧ ದಿಗ್ಬಂಧನ ವಿಧಿಸುವ ಅಮೆರಿಕದ ನೂತನ ಕಾನೂನನ್ನು ಚೀನಾ ಗುರುವಾರ ಖಂಡಿಸಿದೆ ಹಾಗೂ ಅದು ಕ್ಸಿನ್‌ಜಿಯಾಂಗ್ ವಲಯದಲ್ಲಿನ ಚೀನಾದ ನೀತಿಯ ಮೇಲೆ ನಡೆಸಲಾದ ದಾಳಿಯಾಗಿದೆ ಎಂದು ಬಣ್ಣಿಸಿದೆ.
‘‘ಇದರ ವಿರುದ್ಧ ಚೀನಾ ಧೃಢವಾಗಿ ತಿರುಗೇಟು ನೀಡಲಿದೆ ಹಾಗೂ ಅದರ ಪರಿಣಾಮಗಳನ್ನು ಅಮೆರಿಕ ಅನುಭವಿಸಲಿದೆ’’ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.