×
Ad

ಗಲ್ವಾನ್ ಘರ್ಷಣೆ: ಭಾರತ-ಚೀನಾ ನಡುವಿನ ಮೇಜರ್ ಜನರಲ್ ಮಟ್ಟದ ಮಾತುಕತೆ ಅಂತ್ಯ

Update: 2020-06-18 21:36 IST

ಹೊಸದಿಲ್ಲಿ,ಜೂ.18: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಜೂನ್ 15ರ ರಾತ್ರಿ ಉಭಯ ದೇಶಗಳ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಬಳಿಕ ಸೃಷ್ಟಿಯಾಗಿದ್ದ ಹಿಂಸಾತ್ಮಕ ಉದ್ವಿಗ್ನತೆಯ ನಡುವೆಯೇ ಭಾರತ ಮತ್ತು ಚೀನಾಗಳ ಸೇನೆಗಳು ಉದ್ವಿಗ್ನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಗುರುವಾರ ಇನ್ನೊಂದು ಸುತ್ತಿನ ಮಾತುಕತೆಗಳನ್ನು ನಡೆಸಿದವು.

ಬೆಳಿಗ್ಗೆ 10:30ಕ್ಕೆ ಆರಂಭಗೊಂಡಿತ್ತೆನ್ನಲಾದ ಮೇಜರ್ ಜನರಲ್ ಮಟ್ಟದ ಸಭೆಯು ಆರು ಗಂಟೆಗಳ ಸುದೀರ್ಘ ಚರ್ಚೆಗಳ ಬಳಿಕ ಸಂಜೆ ಮುಕ್ತಾಯಗೊಂಡಿದೆ.

ತನ್ಮಧ್ಯೆ ಸೇನಾ ಮೂಲಗಳು ಗಲ್ವಾನ್ ಕಣಿವೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲ ಯೋಧರ ಲೆಕ್ಕ ಸಿಕ್ಕಿದೆ ಮತ್ತು ಯಾವುದೇ ಸಿಬ್ಬಂದಿ ನಾಪತ್ತೆಯಾಗಿಲ್ಲ ಎಂದು ತಿಳಿಸಿವೆ.

ಭಾರತದ ಭೂಪ್ರದೇಶವಾಗಿರುವ ಗಲ್ವಾನ್ ಕಣಿವೆಯ ಮೇಲೆ ತನ್ನ ಸ್ವಾಮಿತ್ವವನ್ನು ಮಂಗಳವಾರ ಮೊದಲ ಬಾರಿಗೆ ಪ್ರತಿಪಾದಿಸಿದ್ದ ಚೀನಾ ಬುಧವಾರ ಅದನ್ನು ಪುನರುಚ್ಚರಿಸಿತ್ತು.

 ಚೀನಾದ ಸ್ವಾಮಿತ್ವ ಹೇಳಿಕೆಯನ್ನು ಬುಧವಾರ ರಾತ್ರಿ ಬಲವಾಗಿ ಆಕ್ಷೇಪಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಲಡಾಖ್‌ನಲ್ಲಿಯ ಇತ್ತೀಚಿನ ಬೆಳವಣಿಗೆಗಳ ಕುರಿತು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಸ್ಥಿತಿಯನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಮತ್ತು ಜೂ.6ರಂದು ಹಿರಿಯ ಕಮಾಂಡರ್‌ಗಳ ನಡುವೆ ಮೂಡಿದ್ದ ತಿಳುವಳಿಕೆಯನ್ನು ಪ್ರಾಮಾಣಿಕತೆಯಿಂದ ಜಾರಿಗೊಳಿಸಬೇಕು. ಚೀನಾದ ಉತ್ಪ್ರೇಕ್ಷಿತ ಮತ್ತು ಅಸಮರ್ಥನೀಯ ಹೇಳಿಕೆಗಳು ಗಡಿ ವಿಷಯದಲ್ಲಿ ಉಭಯ ರಾಷ್ಟ್ರಗಳ ನಡುವೆ ಮೂಡಿದ್ದ ಸಹಮತಕ್ಕೆ ವಿರುದ್ಧವಾಗಿವೆ ಎಂದು ಹೇಳಿತ್ತು.

ಗುರುವಾರ ಬೆಳಿಗ್ಗೆ ತೀಕ್ಷ್ಣ ನಿಲುವು ತಳೆದಿದ್ದ ಭಾರತವು ಗಲ್ವಾನ್ ಕಣಿವೆಯಲ್ಲಿನ ‘ಹಿಂಸಾತ್ಮಕ’ ಘಟನೆಯು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ ಎಂದು ಚೀನಾಕ್ಕೆ ತಿಳಿಸಿತ್ತು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ನಡೆಸಿದ್ದ ದೂರವಾಣಿ ಸಂಭಾಷಣೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ಚೀನಿ ಸೇನೆಯ ಪೂರ್ವಯೋಜಿತ ಕ್ರಮವು ಹಿಂಸಾತ್ಮಕ ಘರ್ಷಣೆಗೆ ನೇರವಾಗಿ ಹೊಣೆಯಾಗಿದೆ ಎಂದು ತಿಳಿಸಿದ್ದರು.

ತನ್ನ ಕ್ರಮಗಳನ್ನು ಪುನರ್‌ಪರಿಶೀಲಿಸುವಂತೆ ಮತ್ತು ಪರಿಹಾರಾತ್ಮಕ ಉಪಕ್ರಮಗಳನ್ನು ತೆಗೆದುಕೊಳ್ಳುವಂತೆ ಚೀನಾಕ್ಕೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

ಸಾಧ್ಯವಾದಷ್ಟು ಶೀಘ್ರ ಉದ್ವಿಗ್ನತೆಯನ್ನು ತಿಳಿಗೊಳಿಸಲು ಹಾಗೂ ಗಡಿಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News