10 ವರ್ಷಗಳ ಹಣಕಾಸು ವಿವರಣೆ ನೀಡಲು ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಸೂಚನೆ

Update: 2020-06-18 16:19 GMT

ಹೊಸದಿಲ್ಲಿ, ಜೂ.18: ಟೆಲಿಕಾಂ ಸಂಸ್ಥೆಗಳು 10 ವರ್ಷದ ಹಣಕಾಸು ವಿವರಣೆಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.

ಸಾರ್ವಜನಿಕ ವಲಯದ (ಸರಕಾರಿ ಸ್ವಾಮ್ಯದ) ಸಂಸ್ಥೆಗಳಿಂದ ರಾಜಸ್ವ ಆದಾಯದ ರೂಪದಲ್ಲಿ 4 ಲಕ್ಷ ಕೋಟಿ ರೂ. ಮೊತ್ತವನ್ನು ‘ಸರಿ ಹೊಂದಿಸಿದ ಆದಾಯ’ಕ್ಕೆ ಬರಬೇಕಾದ ಬಾಕಿ ಹಣ ಎಂದು ವಸೂಲು ಮಾಡುವ ದೂರಸಂಪರ್ಕ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಸಂದರ್ಭ ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಝೀರ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಈ ಮಧ್ಯೆ, ಸಾರ್ವಜನಿಕ ಕ್ಷೇತ್ರದ ಸಂಸ್ಥೆ(ಪಿಎಸ್‌ಯು)ಗಳಿಂದ ಬರಬೇಕಿರುವ ಬಾಕಿಯನ್ನು ವಸೂಲು ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ದೂರಸಂಪರ್ಕ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ. ಪಿಎಸ್‌ಯುಗಳು ಈಗ ಜನತೆಗೆ ದೂರಸಂಪರ್ಕ ಸೇವೆಯನ್ನು ಒದಗಿಸುವ ವ್ಯವಹಾರ ನಡೆಸದ ಕಾರಣ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಕೇಂದ್ರ ಸರಕಾರಕ್ಕೆ ಪಾವತಿಸಬೇಕಿದ್ದ 21,000 ಕೋಟಿ ರೂ.ಯಲ್ಲಿ 18000 ಕೋಟಿ ರೂ. ಮೊತ್ತವನ್ನು ಪಾವತಿಸಿರುವುದಾಗಿ ಭಾರ್ತಿ ಏರ್‌ಟೆಲ್ ತಿಳಿಸಿದೆ. ಸಂಸ್ಥೆಯ 11000 ಉದ್ಯೋಗಿಗಳಿಗೆ ಕೆಲಸವಿಲ್ಲ. ಸಂಸ್ಥೆಗೆ 1 ಲಕ್ಷ ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ನಾವು ಕೊಟ್ಟಿರುವ 15,000 ಕೋಟಿ ಮೊತ್ತದ ಬ್ಯಾಂಕ್ ಗ್ಯಾರಂಟಿ ಸರಕಾರದ ಬಳಿ ಇದೆ. ಇದಕ್ಕಿಂತ ಹೆಚ್ಚಿನ ಜಾಮೀನು ಒದಗಿಸಲು ಸಾಧ್ಯವಿಲ್ಲ ಎಂದು ವೊಡಫೋನ್ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News