×
Ad

ಪುತ್ತೂರು: ಸಂಚಾರಿ ಪೊಲೀಸ್ ಸಿಬ್ಬಂದಿಯಿಂದ ಪತ್ನಿಗೆ ಹಿಂಸೆ-ದೂರು

Update: 2020-06-18 22:27 IST

ಪುತ್ತೂರು: ಕಳೆದ 5 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಪುತ್ತೂರು ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರ ಪತ್ನಿ ತನಗೆ ತನ್ನ ಗಂಡ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಶಾಂತಕುಮಾರ್ ಎಂಬವರ ಪತ್ನಿ ಅಶ್ವಿನಿ ಶಾರದಾ(27) ಪತಿಯ ಹಿಂಸೆ ವಿರುದ್ಧ ದೂರು ನೀಡಿದ ಮಹಿಳೆ.

ನಾವಿಬ್ಬರೂ ಪ್ರೀತಿಸಿ ವಿವಾಹ ಆಗಿದ್ದೆವು. ಆನಂತರ ಗಂಡ ಶಾಂತಕುಮಾರ್ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡುತ್ತಿದ್ದರು. ಹಾಗಾಗಿ ನಾನು ಪಡ್ನೂರಿನಲ್ಲಿ ತಾಯಿ ಮನೆಯಲ್ಲೇ ಇದ್ದು ಆಗಾಗ್ಗೆ ಸಂಪ್ಯದಲ್ಲಿರುವ ಗಂಡನ ವಸತಿ ಗೃಹಕ್ಕೆ ಬಂದು ಹೋಗುತ್ತಿದ್ದೆ. ಇತ್ತೀಚೆಗೆ ನನ್ನ ಗಂಡ ನನ್ನ ಜೊತೆ ಮಾತನಾಡದೆ ನನ್ನ ಮೊಬೈಲ್ ನಂಬರ್ ಕೂಡಾ ಬ್ಲಾಕ್ ಮಾಡಿದ್ದರು. ಜೂ.16ರಂದು ನಾನು ಮಧ್ಯಾಹ್ನ ಗಂಡನಲ್ಲಿ ಮಾತನಾಡಲೆಂದು ಪೊಲೀಸ್ ವಸತಿ ಗೃಹಕ್ಕೆ ಹೋಗಿದ್ದ ಸಂದರ್ಭದಲ್ಲಿ ನನ್ನ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಮುಂದೆ ನನ್ನ ಜೀವಕ್ಕೂ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಂಪ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News