×
Ad

ಕತರ್‌ನಿಂದ ಮಂಗಳೂರಿಗೆ ಆಗಮಿಸಿದ ಪ್ರಥಮ ವಿಮಾನ

Update: 2020-06-19 20:09 IST

​ದೋಹಾ/ಮಂಗಳೂರು, ಜೂ.19: ಕೊರೋನ ಸಂಕಷ್ಟದಲ್ಲಿ ಕತರ್‌ನಲ್ಲಿನ ಸಾವಿರಾರು ಕನ್ನಡಿಗರು ಸಮಸ್ಯೆ ಎದುರಿಸುತ್ತಿದ್ದಾರೆ. ತಾಯ್ನಾಡಿಗೆ ಮರಳಲು ಸೂಕ್ತ ವ್ಯವಸ್ಥೆ ಇಲ್ಲದೇ ತೊಂದರೆಗೆ ಸಿಲುಕಿದ್ದವರಲ್ಲಿ 185 ಅನಿವಾಸಿ ಕನ್ನಡಿಗರು ಶುಕ್ರವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದಾರೆ. ಇದು ಕತರ್‌ನಿಂದ ಅತಂತ್ರ ಕನ್ನಡಿಗರನ್ನು ಹೊತ್ತು ಕರೆತಂದ ಮೊದಲ ವಿಮಾನವಾಗಿದೆ.

ದೋಹಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 185 ಪ್ರಯಾಣಿಕರನ್ನು ಹೊತ್ತು ಮಧ್ಯಾಹ್ನ 12:25ಕ್ಕೆ (ಭಾರತೀಯ ಕಾಲಮಾನ 2:55) ಪ್ರಯಾಣ ಬೆಳೆಸಿದ ವಿಮಾನವು ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಜೆ 7:50ಕ್ಕೆ ತಲುಪಿತು.

‘ವಂದೇ ಭಾರತ ಮಿಷನ್’ ಸೇವೆಯಲ್ಲಿ ದೋಹಾದಿಂದ ಮಂಗಳೂರಿಗೆ ನಿಗದಿಪಡಿಸಿದ ಪ್ರಪ್ರಥಮ ವಿಮಾನದಲ್ಲಿ ಆರು ಶಿಶುಗಳು ಸಹಿತ ಒಟ್ಟು 185 ಪ್ರಯಾಣಿಕರು ತಾಯ್ನಡಿಗೆ ಆಗಮಿಸಿದಂತಾಗಿದೆ.

185 ಮಂದಿಯ ಪೈಕಿ 40ಕ್ಕೂ ಅಧಿಕ ಗರ್ಭಿಣಿಯರು, ವಯೋವೃದ್ಧರು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗೆ ಹೋಗಬೇಕಾಗಿರುವವರು, ಆರ್ಥಿಕ ಹಿನ್ನೆಡೆಯಿಂದ ಅತಂತ್ರ ಪರಿಸ್ಥಿತಿಯಲ್ಲಿರುವ ನಿರುದ್ಯೋಗಿಗಳು ಹಾಗೂ ಫ್ಯಾಮಿಲಿ ವೀಸಾದಲ್ಲಿ ಬಂದು ಸಿಕ್ಕಿಕೊಂಡಿರುವವರು ... ಹೀಗೆ 185 ಮಂದಿ ತಾಯ್ನಿಡಿಗೆ ವಾಪಸಾಗಿದ್ದಾರೆ.

ಈ ವಿಮಾನ ಸೇವೆಗೆ ಹಲವರು ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸಂಕಷ್ಟದಲ್ಲಿರುವವರ ಸೇವೆಗೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಚಿವಾಲಯಗಳಿಗೆ ಪತ್ರ ಬರೆದು, ನಿರಂತರ ದೂರವಾಣಿ ಸಂಪರ್ಕ, ಸಕಾರಾತ್ಮಕ ಫಲಿತಾಂಶ ಸಿಗುವ ತನಕ ಬೆಂಬಿಡದೆ ಓಡಡುತ್ತಿರುವವರ ಪೈಕಿ ಪ್ರಮುಖ ವ್ಯಕ್ತಿ ಕತರ್ ಬಂಟ್ಸ್ ಸಂಘದ ಅಧ್ಯಕ್ಷ ದೀಪಕ್ ಶೆಟ್ಟಿ.

ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ದಿನಕ್ಕೆ ಎರಡು ಬಾರಿ ನಿರಂತರ ಸಂಪರ್ಕದಲ್ಲಿದ್ದವರು ಜಯಪ್ರಕಾಶ್ ಹೆಗ್ಡೆಯವರು. ಶೀಘ್ರದಲ್ಲಿ ವಿಮಾನ ಏರ್ಪಾಡಾಗುವಲ್ಲಿ ಹೆಗ್ಡೆಯವರ ಅಧಿಕ ಶ್ರಮವಿದೆ ಎಂದು ದೀಪಕ್ ಶೆಟ್ಟಿ ತಿಳಿಸಿದ್ದಾರೆ.

ಕತರ್‌ನಲ್ಲಿದ್ದಾರೆ ಸಾವಿರಾರು ಅತಂತ್ರರು !: ಕತರ್‌ನಿಂದ ಕರ್ನಾಟಕಕ್ಕೆ ಇದುವರೆಗೆ ವಂದೇ ಭಾರತ್ ಮಿಷನ್‌ನ ಎರಡು ವಿಮಾನ ಹಾಗೂ ‘ಐಸಿಬಿಎಫ್-ಕೆಎಸ್‌ಕ್ಯೂ’ನ ಖಾಸಗಿ ವಿಮಾನವೊಂದು ತೆರಳಿದೆ. ಕತರ್ ‌ನಲ್ಲಿ ಇನ್ನೂ ಕಾಯುತ್ತಿರುವ ಸಾವಿರಾರು ಜನರನ್ನು ಸಾಗಿಸಲು ನಮಗೆ ಹಲವು ವಿಮಾನಗಳ ಅಗತ್ಯವಿದೆ ಎಂದು ಎಲ್ಲ ಜನಪ್ರತಿನಿಧಿಗಳಲ್ಲಿ ಕಳಕಳಿಯ ವಿನಂತಿ. ನಮಗೆ ನಮ್ಮ ಜನ್ಮಭೂಮಿಗೆ ತೆರಳಲು ಸಹಕರಿಸಿ. ಅವಕಾಶ ಮಾಡಿಕೊಡಿ ಎಂದು ಕತರ್ ಬಂಟ್ಸ್ ಸಂಘದ ಅಧ್ಯಕ್ಷ ದೀಪಕ್ ಶೆಟ್ಟಿ ತಿಳಿಸಿದ್ದಾರೆ.

ಪ್ರಯಾಣಿಕರ ಪಟ್ಟಿ ತಯಾರಿಸುವಲ್ಲಿ ವಂದೇ ಭಾರತ್ ದೋಹಾ ಕರ್ನಾಟಕ ಸಮಿತಿಯ ಇತರ ಸದಸ್ಯರಾದ ನಾಗೇಶ್ ರಾವ್, ಸಂದೀಪ್ ರೆಡ್ಡಿ, ಶಶಿಧರ್ ಹೆಬ್ಬಾಳ್, ಖಲೀಲ್ ಸಾಕಷ್ಟು ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಈಗಾಗಲೇ ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಕರೆಸಿಕೊಳ್ಳಲು ಆರಂಭಿಸಿದ್ದಾರೆ. ಆದರೆ ಕತರ್ ದೇಶದಲ್ಲಿ ಸಿಲುಕಿರುವ ಕನ್ನಡಿಗರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಗಲ್ಫ್‌ನಿಂದ ತಮ್ಮನ್ನು ಯಾರಾದರೂ ಕರೆಸಿಕೊಳ್ಳುವರೇ ಎನ್ನುವ ಆಸೆಗಣ್ಣಲ್ಲೇ ಕಾಲ ಕಳೆಯುವ ಸ್ಥಿತಿ ಕತರ್ ಕನ್ನಡಿಗರದ್ದಾಗಿ ಉಳಿದುಕೊಂಡಿದೆ ಎನ್ನುತ್ತಾರೆ ಅವರು.

''ಕತರ್‌ನಿಂದ ಅತಂತ್ರ ಕನ್ನಡಿಗರನ್ನು ಹೊತ್ತ ವಿಮಾಣವು ದೋಹಾದಿಂದ ಮಂಗಳೂರಿಗೆ ಮುಟ್ಟಿದೆ. ಕಳೆದೆರಡು ತಿಂಗಳಿಂದ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಮಂಗಳೂರಿನವರಿಗೆ ಒಂದು ತಾತ್ಕಾಲಿಕ ನೆಮ್ಮದಿ ಸಿಕ್ಕಿತು. ಮಂಗಳೂರಿಗೆ ತೆರಳಿದ ಎಲ್ಲರ ಮೊಗದಲ್ಲೂ ದೀಪಾವಳಿ, ಈದ್, ಕ್ರಿಸ್ಮಸ್ ಹಬ್ಬ ಆಚರಿಸಿದಷ್ಟಷ್ಟೇ ಸಂಭ್ರಮವಿದೆ''.


- ದೀಪಕ್ ಶೆಟ್ಟಿ,
ಕತರ್ ಬಂಟ್ಸ್ ಸಂಘದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News