ಇಬ್ಬರು ಸಹೋದರರು, ಅವರ ನಾಲ್ವರು ಮಕ್ಕಳ ಮೃತದೇಹ ಫ್ಲ್ಯಾಟ್ ನಲ್ಲಿ ಪತ್ತೆ

Update: 2020-06-19 15:23 GMT

ಅಹ್ಮದಾಬಾದ್: ಕಟ್ಟಡವೊಂದರಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿಯ ಮೃತದೇಹ ಪತ್ತೆಯಾಗಿರುವ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ಇಬ್ಬರು ಸಹೋದರರು ಕೃತ್ಯ ಎಸಗುವ ಮೊದಲು ನಾಲ್ವರು ಮಕ್ಕಳನ್ನು ಕೊಂದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ವಿಂಝೋಲ್ ನ ಸರ್ದಾರ್ ಪಟೇಲ್ ರಿಂಗ್ ರೋಡ್ ನ ಶ್ರೀ ಪ್ರಯೋಷ ರೆಸಿಡೆನ್ಸಿ ಎಂಬ ಕಟ್ಟಡದಲ್ಲಿ ಇಬ್ಬರು ಸಹೋದರರು ಮತ್ತು 4 ಮಕ್ಕಳ ಮೃತದೇಹ ಪತ್ತೆಯಾಗಿತ್ತು.

ಮೃತಪಟ್ಟವರನ್ನು ಗೌರಂಗ್ ಪಟೇಲ್, ಅವರ ಪುತ್ರ ಧ್ರುವ, ಮಗಳು ಶಾನ್ವಿ, ಗೌರಂಗ್ ಹಿರಿಯ ಸಹೋದರ ಅಮ್ರೀಶ್ ಪಟೇಲ್, ಪುತ್ರ ಮಯೂರ್ ಮತ್ತು ಮಗಳು ಕೀರ್ತಿ ಎಂದು ಗುರುತಿಸಲಾಗಿದೆ.

ಬೃಹತ್ ಕಟ್ಟಡದ ಏಳನೆ ಮಹಡಿಯಲ್ಲಿರುವ ಗೌರಂಗ್ ಪಟೇಲ್ ಗೆ ಸೇರಿದ್ದ ಅಪಾರ್ಟ್ ಮೆಂಟ್ ನಲ್ಲಿ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಒಳಗಿನಿಂದ ಲಾಕ್ ಮಾಡಲಾಗಿತ್ತು.

ಬುಧವಾರ ಮಧ್ಯಾಹ್ನದ ನಂತರ ಹೊರಹೋಗಿದ್ದ ತಮ್ಮ ಪತಿಯಂದಿರು ವಾಪಸಾಗಿಲ್ಲ ಎಂದು ಅವರ ಪತ್ನಿಯರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಶುಕ್ರವಾರ ಅಪಾರ್ಟ್ ಮೆಂಟ್ ಗೆ ತೆರಳಿ ಬಾಗಿಲು ಒಡೆದು ಒಳ ನುಗ್ಗಿದರು.

ಸಹೋದರರಿಬ್ಬರ ಮೃತದೇಹ ಹಾಲ್ ನಲ್ಲಿ ಪತ್ತೆಯಾಗಿದ್ದರೆ, ಇಬ್ಬರು ಬಾಲಕರ ಮೃತದೇಹ ಬೆಡ್ ರೂಂನಲ್ಲಿ ಮತ್ತು ಬಾಲಕಿಯರ ಮೃತದೇಹ ಕಿಚನ್ ನಲ್ಲಿ ಪತ್ತೆಯಾಗಿತ್ತು. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬುಧವಾರ ಇವರೆಲ್ಲರೂ ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News