ಸೆಂಟ್ರಲ್ ವಿಸ್ತಾ ಯೋಜನೆಗೆ ಮೂಲಸ್ಥಿತಿಯಲ್ಲಿ ಬದಲಾವಣೆಗಳಿಗೆ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ:ಸರ್ವೋಚ್ಚ ನ್ಯಾಯಾಲಯ

Update: 2020-06-19 15:25 GMT

ಹೊಸದಿಲ್ಲಿ,ಜೂ.19: ದಿಲ್ಲಿಯ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿ.ಮೀ.ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಸೆಂಟ್ರಲ್ ವಿಸ್ತಾ ಯೋಜನೆಗಾಗಿ ಅಧಿಕಾರಿಗಳು ಮೂಲಸ್ಥಿತಿಯಲ್ಲಿ ಮಾಡುವ ಯಾವುದೇ ಬದಲಾವಣೆಗಳಿಗೆ ಅವರೇ ಹೊಣೆಗಾರರಾಗಿರುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.

20,000 ಕೋ.ರೂ.ವೆಚ್ಚದ ಈ ಯೋಜನೆಯಡಿ ಹಲವಾರು ಹೊಸ ಸರಕಾರಿ ಕಟ್ಟಡಗಳನ್ನು ಮತ್ತು ನೂತನ ಸಂಸತ್ ಭವನವನ್ನು ನಿರ್ಮಿಸಲಾಗುತ್ತದೆ.

ಯೋಜನೆಯ ಹಣೆಬರಹವು ತಾನು ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ ಎಂದೂ ನ್ಯಾಯಾಲಯವು ಹೇಳಿತು.

ಕೇಂದ್ರ ಸರಕಾರದ ಸೆಂಟ್ರಲ್ ವಿಸ್ತಾ ಯೋಜನೆಗೆ ಅವಕಾಶ ನೀಡಲು ಮಾಸ್ಟರ್ ಪ್ಲಾನ್‌ನಲ್ಲಿ ಬದಲಾವಣೆಗಳನ್ನು ಅಧಿಸೂಚಿಸುವ ಮುನ್ನ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ವು ತನಗೆ ತಿಳಿಸುವ ಅಗತ್ಯವಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದ್ದು,ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠವು, ತಳಮಟ್ಟದಲ್ಲಿ ಮಾಡುವ ಯಾವುದೇ ಬದಲಾವಣೆಗಳಿಂದ ಸಂಭಾವ್ಯ ಹಾನಿಗಳಿಗೆ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ಹೇಳಿತು.

ಯೋಜನೆಯು ಜಾರಿಗೊಳ್ಳುವ ಪ್ರದೇಶದಲ್ಲಿ ರಾಷ್ಟ್ರೀಯ ಪರಂಪರೆಯ ಹಲವಾರು ಸ್ಮಾರಕಗಳಿದ್ದು,ಯೋಜನೆಗಾಗಿ ಇವುಗಳನ್ನು ತೆಗೆಯಬಹುದು. ಹೀಗಾಗಿ ಯೋಜನಾ ನಿವೇಶನದ ಮೂಲಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂಬ ಅರ್ಜಿದಾರರ ವಾದಕ್ಕೆ ಪೀಠವು ಸೊಪ್ಪು ಹಾಕಲಿಲ್ಲ. ಯೋಜನೆಯು ಒಂದೇ ವಾರದಲ್ಲಿ ಪೂರ್ಣಗೊಳ್ಳುವುದಿಲ್ಲ ಎಂದು ಅದು ಹೇಳಿತು.

ಭೂಮಿ ಬಳಕೆಯ ಬದಲಾವಣೆಗೆ ಸಂಬಂಧಿಸಿದಂತೆ ಮತ್ತು ಯೋಜನೆಗೆ ಪರಿಸರ ಅನುಮತಿ ನೀಡಿ ಎರಡು ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದಾಗ,‘ನಾವೀಗಾಗಲೇ ಹೇಳಿದ್ದೇವೆ.ಅಧಿಕಾರಿಗಳು ಏನೇ ಕ್ರಮ ಕೈಗೊಂಡರೂ ಅದಕ್ಕೆ ಅವರೇ ಹೊಣೆಯಾಗಿರುತ್ತಾರೆ ’ಎಂದು ನ್ಯಾಯಾಲಯವು ಹೇಳಿತು.

ಯೋಜನೆಗೆ ಅಗತ್ಯ ಅನುಮತಿಯನ್ನು ನೀಡುವಾಗ ಯಾವುದೇ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಮುಂದಿನ ವಿಚಾರಣೆಯನ್ನು ಜು.7ಕ್ಕೆ ನಿಗದಿಗೊಳಿಸಿದ ಪೀಠವು,ಯೋಜನೆಗಾಗಿ ಡಿಡಿಎ ಕೈಗೊಂಡಿರುವ ಇತ್ತೀಚಿನ ನಿರ್ಧಾರಗಳನ್ನು ಪ್ರಶ್ನಿಸಲು ತನ್ನ ಅರ್ಜಿಯಲ್ಲಿ ತಿದ್ದುಪಡಿಗಳನ್ನು ಮಾಡಲು ಅರ್ಜಿದಾರರಿಗೆ ಅನುಮತಿಯನ್ನು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News