×
Ad

ನದಿತೀರದ ದೋಣಿ ತೆರವಿಗೆ ದ.ಕ. ಜಿಲ್ಲಾ ಡಿಸಿ ಸೂಚನೆ

Update: 2020-06-19 21:09 IST

ಮಂಗಳೂರು, ಜೂ.19: ನೇತ್ರಾವತಿ, ಫಲ್ಗುಣಿ/ಗುರುಪುರ ಹಾಗೂ ಶಾಂಭವಿ ನದಿಗಳ ದಂಡೆಯ ಸರಕಾರಿ ಜಮೀನಿನಲ್ಲಿ ಇರಿಸಿರುವ ದೋಣಿ ಗಳನ್ನು ಅನಧಿಕೃತ ಮರಳುಗಾರಿಕೆಗೆ ಬಳಸುವ ಸಾಧ್ಯತೆ ಇದ್ದು, ಕೂಡಲೇ ದೋಣಿಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಖಡಕ್ ಸೂಚನೆ ರವಾನಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ‘ಅನಧಿಕೃತ ಉಪ ಖನಿಜ ಗಣಿಗಾರಿಕೆ ಹಾಗೂ ಸಾಗಾಟ ನಿಯಂತ್ರಿಸುವ ಕುರಿತ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ದೋಣಿ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ದೋಣಿಗಳನ್ನು ಸಂಬಂಧಪಟ್ಟ ಮಾಲಕರು ಮೂರು ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ ಅಂತಹ ದೋಣಿಗಳನ್ನು ಸರಕಾರವು ವಶಪಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಅನಧಿಕೃತ ಮರಳುಗಾರಿಕೆ- ಸಾಗಾಟ ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಕೈಗೊಂಡ ಕ್ರಮಗಳ ಕುರಿತು ಈ ವೇಳೆ ಪ್ರಗತಿ ಪರಿಶೀಲನೆ ನಡೆಸಲಾಯಿತು. 

ತಂಡಗಳು ಪ್ರತಿನಿತ್ಯವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ. ಜೂ.18ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಗಳ ಎರಡು ತಂಡಗಳು ಮೂಡುಬಿದಿರೆ ತಾಲೂಕಿನ ನಿಡ್ಡೋಡಿ, ನೀರುಡೆ ಪ್ರದೇಶ ಮತ್ತು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಕಲ್ಲು ಗಣಿ ಪ್ರದೇಶಗಳಲ್ಲಿ ದಾಳಿ ನಡೆಸಿ, ಕಾನೂನು ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಮಂಗಳೂರು ತಹಶೀಲ್ದಾರ್ ನೇತೃತ್ವದ ತಂಡವು ಜೂ.17ರಂದು ಅಡ್ಯಾರ್, ಶಾಂಭವಿ ನದಿ, ಮಳವೂರು, ಆದ್ಯಪಾಡಿ ಡ್ಯಾಂ ಪ್ರದೇಶಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದೆ. ಆ ಸಮಯದಲ್ಲಿ ನದಿಯ ದಂಡೆಗಳಲ್ಲಿ ದೋಣಿಗಳನ್ನು ಇರಿಸಿರುವುದು ಕಂಡು ಬಂದಿರುವುದನ್ನು ಅಧಿಕಾರಿಗಳು ಜಿಲ್ಲಾಧಿಕಾರಿಯ ಗಮನಕ್ಕೆ ತಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News