15 ದಿನಗಳೊಳಗೆ ವಲಸೆ ಕಾರ್ಮಿಕರಿಗೆ ಮನೆಗೆ ಮರಳಲು ವ್ಯವಸ್ಥೆ ಮಾಡಿ

Update: 2020-06-19 15:44 GMT

ಹೊಸದಿಲ್ಲಿ,ಜೂ.19: ಕೋವಿಡ್19 ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಡಿಮೆ ಕಳೆದುಕೊಂಡು ಊರಿಗೆ ವಾಪಸಾಗುತ್ತಿರುವ ವಲಸೆ ಕಾರ್ಮಿಕರನ್ನು ಗುರುತಿಸಿ, ಮುಂದಿನ 15 ದಿನಗಳೊಳಗೆ ಅವರ ಸಾಗಾಟಕ್ಕೆ ಸೂಕ್ತ ಏರ್ಪಾಡುಗಳನ್ನು ಮಾಡಬೇಕೆಂದು ಸುಪ್ರೀಂಕೋರ್ಟ್ ಶುಕ್ರವಾರ ಪುನರುಚ್ಚರಿಸಿದೆ. ವಲಸೆ ಕಾರ್ಮಿಕರ ಮಹಾನಿರ್ಗಮನದ ಸಮಸ್ಯೆಯನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ. ಕೌಲ್ ಹಾಗೂ ಎಂ.ಆರ್.ಶಾ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆಯೆಂದು ಬಾರ್‌ಆ್ಯಂಡ್‌ಬೆಂಚ್ ಸುದ್ದಿಜಾಲತಾಣ ಶುಕ್ರವಾರ ವರದಿ ಮಾಡಿದೆ.

     ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಕೇಂದ್ರ ಸರಕಾರವು ‘ಮಾತು ಮತ್ತು ಕೃತಿಯಲ್ಲಿ ಪಾಲಿಸುತ್ತಿಲ್ಲ’ ಎಂದು ನ್ಯಾಯವಾದಿ ಇಂದಿರಾ ಜೈಸಿಂಗ್ ಆಪಾದಿಸಿದರು. ವಲಸೆ ಕಾರ್ಮಿಕರು ಒದಗಿಸಬೇಕಾದ ಮಾಹಿತಿಗಳ ದೇಶೀಯ ಭಾಷೆಗಳಲ್ಲಿ ಈ ಬಗ್ಗೆ ಯಾವುದೇ ಜಾಹೀರಾತುಗಳನ್ನು ನೀಡಲಾಗುತ್ತಿಲ್ಲ. ವಲಸೆ ಕಾರ್ಮಿಕರ ಪ್ರಯೋಜನಕ್ಕಾಗಿ ಸುಪ್ರೀಂಕೋರ್ಟ್‌ನ ಆದೇಶಗಳನ್ನು ರಾಜ್ಯ ಸರಕಾರಗಳು ಪಾಲಿಸುತ್ತಿಲ್ಲ’’ ಎಂದವರು ಹೇಳಿದ್ದಾರೆ.

  ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ರಾಜ್ಯ ಸರಕಾರಗಳು ಮನವಿ ಸಲ್ಲಿಸಿದ 24 ತಾಸುಗಳ ಒಳಗೆ ವಲಸೆ ಕಾರ್ಮಿಕರ ಸಾಗಣೆಗಾಗಿ ವಿಶೇಷ ರೈಲುಗಳನ್ನು ಕಳುಹಿಸಲಾಗಿದೆ ಎಂದವರು ತಿಳಿಸಿದರು.

  ಸುಪ್ರೀಂಕೋರ್ಟ್‌ನ ಆದೇಶಕ್ಕೆ ವ್ಯತಿರಿಕ್ತವಾಗಿ ವಲಸೆ ಕಾರ್ಮಿಕರಿಗೆ ಅವರ ಪ್ರಯಾಣಕ್ಕೆ ಹಣಪಾವತಿಸುವಂತೆ ಕೇಳಲಾಗುತ್ತಿದೆ ಎಂದು ನ್ಯಾಯವಾದಿ ಗೋಪಾಲ್ ಶಂಕರನಾರಾಯಣನ್ ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠವು ವಲಸೆಕಾರ್ಮಿಕರ ಸಾಗಾಟದ ಹಣವನ್ನು ಕೇಂದ್ರ ಪಾವತಿಸಲಿ ಅಥವಾ ರಾಜ್ಯಗಳು ಪಾವತಿಸಲಿ ಅದು ವಿಷಯವಲ್ಲ. ಒಟ್ಟಿನಲ್ಲಿ ವಲಸೆ ಕಾರ್ಮಿಕರು ಹಣಪಾವತಿಸಬಾರದು ಎಂಬುದೇ ನಮ್ಮ ಆದೇಶವಾಗಿದೆ ಎಂದರು.

  ವಲಸೆ ಕಾರ್ಮಿಕರ ಸಾಗಾಣಿಕೆಗೆ ಸುಪ್ರೀಂಕೋರ್ಟ್ ನಿಗದಿಪಡಿಸಿದ 15 ದಿನಗಳ ಅವಧಿಯು ಕಡ್ಡಾಯವೇನಲ್ಲ ಎಂಬ ಕರ್ನಾಟಕ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಶಾ ಅವರು, ಸುಪ್ರೀಂಕೋರ್ಟ್‌ನ ಆದೇಶವು ಕಡ್ಡಾಯವಾಗಿ ಪಾಲಿಸತಕ್ಕದ್ದೆಂದು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಬೇಕಾಗಿದೆ ಎಂದರು. ಜುಲೈ 8ರಂದು ನ್ಯಾಯಾಲಯ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News