ದಿಲ್ಲಿ ಹಿಂಸಾಚಾರ: ಗಾಯಾಳುವಿನ ಸಾವಿನಲ್ಲಿ ಪೊಲೀಸರ ಪಾತ್ರವನ್ನು ಕೈಬಿಟ್ಟ ಎಫ್‌ಐಆರ್!

Update: 2020-06-19 15:50 GMT

ಹೊಸದಿಲ್ಲಿ,ಜೂ.23: ಈ ವರ್ಷ ಈಶಾನ್ಯದಿಲ್ಲಿಯಲ್ಲಿ ನಡೆದ ಹಿಂಸಾಚಾರದ ವೇಳೆ 23 ವರ್ಷದ ಯುವಕನೊಬ್ಬನ ಸಾವಿನಲ್ಲಿ ಪೊಲೀಸರ ಕೈವಾಡವಿರುವ ಆರೋಪದ ಬಗ್ಗೆ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್)ನಲ್ಲಿ ಯಾವುದೇ ಉಲ್ಲೇಖವನ್ನು ಮಾಡಿಲ್ಲವೆಂದು  Huffpost ವರದಿ ಮಾಡಿದೆ.

ಫೆಬ್ರವರಿ 24ರಿಂದ ಮೂರು ದಿನಗಳ ಕಾಲ ಈಶಾನ್ಯ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ಸಂದರ್ಭ, ಐವರು ಗಾಯಾಳುಗಳು ರಸ್ತೆಯಲ್ಲಿ ನರಳುತ್ತಾ ಬಿದ್ದುಕೊಂಡಿರುವುದನ್ನು ಹಾಗೂ ಅವರಿಗೆ ರಾಷ್ಟ್ರಗೀತೆ ಹಾಗೂ ವಂದೇಮಾತರಂ ಹಾಡುವಂತೆ ಪೊಲೀಸರು ಬಲವಂತಪಡಿಸುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಗಾಯಾಳುಗಳಲ್ಲಿ ಓರ್ವನಾದ ಕರ್ದಾಮ್‌ಪುರಿ ಪ್ರದೇಶದ ನಿವಾಸಿ ಫೈಝಾನ್ ಆಸ್ಪತ್ರೆಯಲ್ಲಿ ಗಂಭೀರ ಗಾಯಗಳೊಂದಿಗೆ ಕೊನೆಯುಸಿರೆಳೆದಿದ್ದರು.

ಆದಾಗ್ಯೂ, ಘಟನೆಗೆ ಸಂಬಂಧಿಸಿ ಭಜನ್‌ಪುರ ಪೊಲೀಸ್‌ಠಾಣೆಯಲ್ಲಿ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ವಿವಾದಿತ ವಿಡಿಯೋದ ಯಾವುದೇ ಉಲ್ಲೇಖ ಮಾಡಲಾಗಿಲ್ಲ. ಫೈಝಾನ್ ಹಾಗೂ ಇತರ ನಾಲ್ವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪವನ್ನ್ನು ಕೂಡಾ ಎಫ್‌ಐಆರ್ ಪ್ರಸ್ತಾಪಿಸಿಲ್ಲ. ಹಲ್ಲೆಗೊಳಗಾದ ಬಳಿಕ ಫೈಝಾನ್ ಪೊಲೀಸರ ವಶದಲ್ಲಿದ್ದನೆಂಬ ಈ ಮೊದಲು ಪೊಲೀಸರು ನೀಡಿದ ಹೇಳಿಕೆಗಳನ್ನು ಕೂಡಾ ಎಫ್‌ಐಆರ್ ಕೈಬಿಟ್ಟಿದೆ. ಪೊಲೀಸರು ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಗಾಯಾಳು ಪೈಝಾನನ್ನು ಗುರುತೇಗ್‌ಬಹಾದೂರ್ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬಳಿಕ ಆತ ಅಲ್ಲಿಂದ ನಾಪತ್ತೆಯಾಗಿದ್ದ ಎಂದು ತಿಳಿಸಲಾಗಿದೆ. ಪೊಲೀಸರು ಫೈಝಾನ್‌ನ ನಿವಾಸಕ್ಕೆ ಹೋದಾಗ ಆತ ಅಲ್ಲಿರಲಿಲ್ಲ. ಆನಂತರ ಆತ ಲೋಕನಾಯಕ ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಅಲ್ಲಿ ಆತ ಸಾವನ್ನಪ್ಪಿದನೆಂದು ಎಫ್‌ಐಆರ್ ಹೇಳಿದೆ.

 ಹೇಳಿಕೆ ಬದಲಿಸಲು ಪೊಲೀಸರ ಅಮಿಷ: ಫೈಝಾನ್ ತಾಯಿಯ ಆರೋಪ

ಫೈಝಾನ್‌ನ ಮರಣೋತ್ತರ ಪರೀಕ್ಷೆಯ ವರದಿಯು ಆತನ ಕುಟುಂಬಕ್ಕೆ ಇನ್ನೂ ಲಭ್ಯವಾಗಿಲ್ಲ. ತನ್ನ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆಂದು ತಾನು ಈ ಮೊದಲು ನೀಡಿದ್ದ ಹೇಳಿಕೆಯನ್ನು ಬದಲಿಸುವಂತೆ ಪೊಲೀಸರು ತಿಳಿಸಿದ್ದರೆಂದು ಆತನ 61 ವರ್ಷ ವಯಸ್ಸಿನ ತಾಯಿ ತಿಳಿಸಿದ್ದಾರೆ. ತನ್ನ ಹೇಳಿಕೆಯನ್ನು ಬದಲಿಸಿದಲ್ಲಿ ಹಣ ನೀಡುವುದಾಗಿಯೂ ಪೊಲೀಸರು ಆಮಿಷವೊಡ್ಡಿದ್ದರೆಂದು ಆಕೆ ಹೇಳಿರುವುದಾಗಿ Huffpost ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News