ನಗರ ಹಸಿರೀಕರಣ ಪ್ರತಿಯೊಬ್ಬರ ಕರ್ತವ್ಯ: ಶಾಸಕ ವೇದವ್ಯಾಸ ಕಾಮತ್

Update: 2020-06-20 11:27 GMT

ಮಂಗಳೂರು, ಜೂ.20: ನಗರ, ಪರಿಸರ ಹಸೀರೀಕರಣಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಎಂದು ಅರಿತಾಗ ಪರಿಸರ ಸಂರಕ್ಷಣೆ ಕಷ್ಟ ಸಾಧ್ಯವೇನಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ನಗರದ ಲೇಡಿಹಿಲ್‌ನ ಪತ್ರಿಕಾಭವನ ಎದುರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆ ವತಿಯಿಂದ ನಡೆದ ವನಮಹೋತ್ಸವ ಕಾಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ನಗರ ಪ್ರದೇಶದಲ್ಲೂ ನಿಯಮ ಪ್ರಕಾರ ಶೇ.22 ಹಸಿರೀಕರಣ ಬೇಕು. ಆದರೆ ಮಂಗಳೂರು ಮಹಾನಗರದಲ್ಲಿ ಕೆಲವೊಂದು ಪ್ರದೇಶದಲ್ಲಿ ಶೇ.14 ಇದ್ದರೆ, ಇನ್ನು ಕೆಲವು ವಾರ್ಡ್ ಶೇ.2,3ಕೂಡಾ ಇಲ್ಲ ಎಂದವರು ಕಳವಳ ವ್ಯಕ್ತಪಡಿಸಿದರು.

ಪ್ರಕೃತಿ ನಮಗೆ ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ಕೊಡುಗೆಯಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ 10ಸಾವಿರ ಗಿಡಗಳನ್ನು ನೆಡಲಾಗಿದೆ. ಇದೇ ರೀತಿ ನಗರದ ಅಭಿವೃದ್ಧಿಯೊಂದಿಗೆ ಹಸೀರೀಕರಣದ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ವರ್ಷ ವನಮಹೋತ್ಸವ ಆಚರಿಸುವ ಮೂಲಕ ಮಾದರಿಯಾಗಿದೆ ಎಂದರು.

ನಗರದ ಲೇಡಿಹಿಲ್, ಆಗ್ನೇಸ್ ಸೇರಿದಂತೆ ಮೂರು ವೃತ್ತಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಈ ಮೂರು ವೃತ್ತಗಳನ್ನು ಸ್ಕೂಲ್ ಝೋನ್‌ಗಳಾಗಿ ಮಾರ್ಪಾಡು ಮಾಡಿ ಅಂತರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಎಚ್.ಆರ್. ನಾಯ್ಕ ಮಾತನಾಡಿ, ನೈಟ್ರೋಜನ್, ಆಕ್ಸಿಜನ್ ಹೆಚ್ಚಳದಿಂದ ಸಮಸ್ಯೆಯಿಲ್ಲ. ಕಾರ್ಬನ್ ಡೈ ಆಕ್ಸೈಡ್ ಸೂರ್ಯನ ಕಿರಣಗಳ ಶಕ್ತಿ ಹಿಡಿದಿಟ್ಟು ಉಷ್ಣತೆ ಹೆಚ್ಚಳ ಮಾಡುತ್ತಿದ್ದು, ಆಗ ಪ್ರಕೃತಿಯಲ್ಲಿ ಏರು-ಪೇರಾಗುತ್ತದೆ. ಪ್ರಕೃತಿಯಲ್ಲಿ ಗಿಡಗಳ ಸಂಖ್ಯೆ ಹೆಚ್ಚಾಗಿದ್ದರೆ ಕಾರ್ಬನ್ ಡೈಆಕ್ಸೈಡ್‌ನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಹೆಚ್ಚಾಗಿ ಮರಗಳನ್ನು ಬೆಳೆಯಬೇಕು ಎಂದರು.

ಸಹಾಯಕ ಮುಖ್ಯ ಅರಣ್ಯಾಧಿಕಾರಿ ಶಂಕರೇಗೌಡ, ವಲಯ ಅರಣ್ಯಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ. ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News