×
Ad

ಎಸೆಸೆಲ್ಸಿ: ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ

Update: 2020-06-20 18:28 IST

ಮಂಗಳೂರು, ಜೂ.20: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯು ಜೂ.25ರಿಂದ ಜು.4ರವರೆಗೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಕೇರಳದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಕೇರಳ ರಾಜ್ಯದ ಸುಮಾರು 367 ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದು, ಈಗ ನಡೆಯಲಿರುವ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ದ.ಕ. ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ.

ಕೊರೋನ ಸೋಂಕಿನಿಂದಾಗಿ ಲಾಕ್‌ಡೌನ್ ಹಿನ್ನೆಲೆ ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ/ಪೋಷಕರಿಗೆ ತಮ್ಮ ಸ್ವಂತ ವಾಹನದಲ್ಲಿ ಕೂಡ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಅವಕಾಶ ಇಲ್ಲ. ಆದ್ದರಿಂದಲೇ ಜಿಲ್ಲೆಯ ಖಾಸಗಿ ಶಾಲೆಯ ಬಸ್‌ಗಳ ಮೂಲಕ ನಿಗದಿಪಡಿಸಿದ ಕೇರಳ-ಕರ್ನಾಟಕ ಗಡಿ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಬರುವುದು, ಪರೀಕ್ಷೆ ಮುಗಿದ ತಕ್ಷಣ ವಾಪಸ್ ಆಯಾ ಗಡಿ ಪ್ರದೇಶಕ್ಕೆ ತಲುಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ಇಲಾಖೆಯು ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್ ಮೂಲಕ ಪರೀಕ್ಷಾ ಪ್ರವೇಶ ಪತ್ರವನ್ನು ರವಾನಿಸಿದ್ದು, ವಾಟ್ಸ್‌ಆ್ಯಪ್ ಮೂಲಕ ಪ್ರವೇಶ ಪತ್ರ ಸಿಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನದಂದು ನೋಡಲ್ ಅಧಿಕಾರಿಗಳ ಮೂಲಕ ನಿಗದಿಪಡಿಸಿದ ಗಡಿ ಪ್ರದೇಶದಲ್ಲೇ ಪ್ರವೇಶ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಗಡಿ ಪ್ರದೇಶದ ಚೆಕ್‌ಪೋಸ್ಟ್:
ಬಂಟ್ವಾಳ- ಪಾತ್ತೂರು, ಮುಗುಲಿ, ಆನೆಕಲ್ ಸಾರಡ್ಕ, ಬೆರಿಪದವು, ನಂದಾರಾಪಡ್ಪು, ಕೆದಂಬಾಡಿ, ಬಾಯಾರು, ಕಾಯಾರಮರ್, ತಲಕ್ಕಿ, ಸಾಲೆತ್ತೂರು
ಮಂಗಳೂರು- ತಲಪಾಡಿ, ಮಂಜನಾಡಿ ಬಸ್ ನಿಲ್ದಾಣ, ತಲಪಾಡಿ ಟೋಲ್‌ಗೇಟ್

ಪುತ್ತೂರು- ಅರ್ಧಮೂಲೆ, ಗಾಳಿಮುಖ, ಕಾಯರ್‌ಪದವು, ಮಯ್ಯಲ, ಮೆನಸಿಕಾನಾ, ಪಾಣಾಜೆ, ಪಂಚೋಡಿ, ಪಾಂಡಿ, ಪಿಲಿಪುದೆ, ಸಾರಡ್ಕ, ಸ್ವರ್ಗ, ತಲಪಾಡಿ
ಸುಳ್ಯ- ಜಾಲ್ಸೂರ್/ಮುರೂರ್, ಕೊಲ್ಚಾರ್/ಕಲ್ಲಪಳ್ಳಿ

ಈ ಎಲ್ಲ ವ್ಯಾಪ್ತಿಯಲ್ಲಿ ಪರೀಕ್ಷಾ ದಿನದಂದು ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷಾ ಪ್ರವೇಶ ಪತ್ರ (ವಾಟ್ಸ್‌ಆ್ಯಪ್ ಮೂಲಕ/ ಮೂಲ ಪ್ರತಿ/ ಜೆರಾಕ್ಸ್ ಪ್ರತಿ) ಹಾಜರುಪಡಿಸಿದಲ್ಲಿ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶವಿದೆ.

ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವ್ಯವಸ್ಥೆ ಮಾಡಲಾಗುವ ಬಸ್‌ಗಳ ಮೂಲಕ ಪ್ರಯಾಣಿಸಿ, ಪರೀಕ್ಷೆ ಮುಗಿದ ಬಳಿಕ ಕೇರಳಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News