ಜೂ.22-28: ಮುಈನುಸ್ಸುನ್ನ ಮೋರಲ್ ಅಕಾಡಮಿಯ ಸಾಪ್ತಾಹಿಕ ಕಾರ್ಯಕ್ರಮ
ಮಂಗಳೂರು, ಜೂ.20: ಸೈಯ್ಯದ್ ಪೋಸೋಟ್ ತಂಙಳ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ಹಾವೇರಿಯ ಸವಣೂರು ಎಂಬಲ್ಲಿ 6 ವರ್ಷದ ಹಿಂದೆ ಸ್ಥಾಪನೆಗೊಂಡ ಮುಈನುಸ್ಸುನ್ನ ಮೋರಲ್ ಅಕಾಡಮಿಯು ದಾವಣಗೆರೆಯ ದಾರುಲ್ ಉಲೂಂನ ರಹ್ಮಾನಿಯಾ ಕಾಂಪೌಂಡ್‌ನಲ್ಲಿ ಜೂ.22ರಿಂದ 28ರವರೆಗೆ ಸಾಪ್ತಾಹಿಕ ಕಾರ್ಯಕ್ರಮ ಆಯೋಜಿಸಿದೆ.
ಜೂ.22ರಂದು ಆನ್‌ಲೈನ್‌ನಲ್ಲಿ ಸ್ಥಾಪನಾ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜೂ.28ಕ್ಕೆ ದಾವಣಗೆರೆಯಲ್ಲಿ ಹನಫಿ ಶರೀಅತ್ ಕಾಲೇಜು ಮತ್ತು ಹುಸೈನಿಯಾ ಸ್ಮಾರಕ ಗ್ರಂಥಾಲಯ ಉದ್ಘಾಟನೆಗೊಳ್ಳಲಿದೆ. ಈ ಮಧ್ಯೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರ ಹಿಂದುಳಿದ ಉತ್ತರ ಕರ್ನಾಟಕದಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಸಂಸ್ಥೆಯನ್ನು ಸಣ್ಣ ಮಟ್ಟದಲ್ಲಿ ಆರಂಭಿಸುವುದಕ್ಕಾಗಿ ಸುಮಾರು 6 ವರ್ಷದ ಹಿಂದೆ ಕಟ್ಟಡ ಹುಡುಕುತ್ತಿದ್ದೆವು. ದಾವಣಗೆರೆ, ಹರಿಹರ, ರಾಣೆಬೆನ್ನೂರು ಮತ್ತಿತರ ಕಡೆ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಹಾವೇರಿ ಜಿಲ್ಲೆಯ ಸವಣೂರಿನ ಲಕ್ಷ್ಮೇಶ್ವರ ರಸ್ತೆಯ ರಮಾಕಾಂತ್ ಶೇಂಡೆ ಎಂಬವರ ಆಶಾ ನಿಲಯದಲ್ಲಿ ಸ್ಥಳಾವಕಾಶ ಸಿಕ್ಕಿತು. ಹಾಗೇ ಆ ಮನೆಯ ಮಹಡಿಯ ಮೇಲಿನ ಹಾಲನ್ನು ರಮಾಕಾಂತ್ ಉಚಿತವಾಗಿ ಕೊಡಲು ಮುಂದಾದರು. ಜೊತೆಗೆ ಮೂರು ಬಾಡಿಗೆ ಮನೆಗಳನ್ನೂ ನೀಡಿದರು. 33 ಮಕ್ಕಳೊಂದಿಗೆ ಸ್ಥಾಪನೆಗೊಂಡ ಸಂಸ್ಥೆಯು ಹಾವೇರಿಯಲ್ಲದೆ ದಾವಣಗೆರೆ, ರಾಣೆಬೆನ್ನೂರುವಿನ ಶಾಖೆಯನ್ನು ಹೊಂದಿವೆ. ಸುಮಾರು 1 ಸಾವಿರ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಮುಈನುಸುನ್ನಾದ ಪ್ರಧಾನ ಕಾರ್ಯದರ್ಶಿ ಕೆಎಂ ಮುಸ್ತಫಾ ನಈಮಿ ಹಿಮಮಿ ಸಖಾಫಿ ತಿಳಿಸಿದ್ದಾರೆ.