×
Ad

ಉಡುಪಿ: ಹುತಾತ್ಮ ವೀರ ಯೋಧರಿಗೆ ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ ಅರ್ಪಣೆ

Update: 2020-06-20 19:55 IST

ಉಡುಪಿ, ಜೂ.20: ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲಡಾಕ್‌ನಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಣಾ ಕಾರ್ಯಕ್ರಮವನ್ನು ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ಆಯೋಜಿಸಲಾಗಿತ್ತು.

ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪರಾಜ್, ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಕುತಂತ್ರದಿಂದ ಹುತಾತ್ಮರಾದ 20 ಭಾರತೀಯ ಸೈನಿಕರ ಬದಲಾಗಿ ಚೀನಾದ 2000 ಸೈನಿಕರನ್ನು ಸದೆಬಡಿಯುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು. ನಮ್ಮ ಶತ್ರು ರಾಷ್ಟ್ರಗಳು ಕುತಂತ್ರದಿಂದ ದೇಶವನ್ನು ಕಬಳಿಸುವ ಸಂಚು ರೂಪಿಸುತ್ತಿದೆ. ಇದಕ್ಕೆ ತಕ್ಕ ಉತ್ತ ನೀಡಬೇಕಾಗಿದೆ ಎಂದು ಹೇಳಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಂಯೋಜಕ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ವಿನಯರಾಜ್ ಮಾತನಾಡಿ, ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೆ ಆತ್ಮಸ್ಥೈರ್ಯ ತುಂಬಿಸುವುದು ಪ್ರತಿಯೊಬ್ಬ ಭಾರತೀಯ ಕರ್ತವ್ಯ. ದೇಶದ ಭದ್ರತೆ ವಿಚಾರದಲ್ಲಿ ನಾವೆಲ್ಲ ಪ್ರಧಾನಿಗೆ ಬೆಂಬಲವಾಗಿ ನಿಲ್ಲಬೇಕು. ಹುತಾತ್ಮರಾದ 20 ಮಂದಿ ಯೋಧರ ಕುಟುಂಬಕ್ಕೆ ರಕ್ಷಣಾ ಸಚಿವಾಲಯ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿ ಶೆಟ್ಟಿ, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ನರಸಿಂಹಮೂರ್ತಿ, ಪ್ರಖ್ಯಾತ್ ಶೆಟ್ಟಿ, ದಿನೇಶ್ ಪುತ್ರನ್, ಹಬೀಬ್ ಅಲಿ, ನಿತ್ಯಾನಂದ ಶೆಟ್ಟಿ, ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ಸೆಲಿನಾ ಕರ್ಕಡ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ರೋಶಿನಿ ಒಲಿವೇರಾ, ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜನಾರ್ದನ ಭಂಡಾರ್ಕರ್, ಹರೀಶ್ ಕಿಣಿ, ಕೃಷ್ಣಮೂರ್ತಿ ಆಚಾರ್ಯ, ಗಣೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News