ಬಿಜೆಪಿಗೆ ಈಗ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ದುಪ್ಪಟ್ಟಿಗೂ ಹೆಚ್ಚಿನ ಸದಸ್ಯ ಬಲ

Update: 2020-06-20 15:23 GMT

ಹೊಸದಿಲ್ಲಿ,ಜೂ.20: ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಯ ಅಂತಿಮ ಸುತ್ತಿನ ಫಲಿತಾಂಶ ಪ್ರಕಟಗೊಳ್ಳುವುದರೊಂದಿಗೆ ಬಿಜೆಪಿಯು ಮೇಲ್ಮನೆಯಲ್ಲಿ ಸಂಖ್ಯಾಬಲದಲ್ಲಿ ಪ್ರತಿಪಕ್ಷದೊಂದಿಗಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಬಿಜೆಪಿ ಈಗ ರಾಜ್ಯಸಭೆಯಲ್ಲಿ 86 ಸ್ಥಾನಗಳನ್ನು ಹೊಂದಿದ್ದರೆ ಕಾಂಗ್ರೆಸ್‌ನ ಬಲ 41 ಸ್ಥಾನಗಳಿಗೆ ಕುಸಿದಿದೆ.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಈಗ ಎನ್‌ಡಿಎ ಸುಮಾರು 100 ಸದಸ್ಯರನ್ನು ಹೊಂದಿದೆ. ಎಐಎಡಿಎಂಕೆ(9 ಸ್ಥಾನ), ಬಿಜೆಡಿ(9), ವೈಎಸ್‌ಆರ್ ಕಾಂಗ್ರೆಸ್(6)ನಂತಹ ಮಿತ್ರಪಕ್ಷಗಳು, ಹಲವಾರು ನಾಮನಿರ್ದೇಶಿತ ಸದಸ್ಯರು ಮತ್ತು ಸಣ್ಣಪಕ್ಷಗಳನ್ನು ಗಣನೆಗೆ ತೆಗೆದುಕೊಂಡರೆ ಮೋದಿ ಸರಕಾರವು ಸದನದಲ್ಲಿ ಸಂಖ್ಯಾಬಲದ ಯಾವುದೇ ಗಂಭೀರ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಗಳಿಲ್ಲ.

 ರಾಜ್ಯಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿಯು ವಿಧಾನಸಭೆಗಳಲ್ಲಿ ತನ್ನ ಶಾಸಕರ ಸಂಖ್ಯೆ ಮತ್ತು ಇತರ ಪಕ್ಷಗಳಿಂದ, ವಿಶೇಷವಾಗಿ ಕಾಂಗ್ರೆಸ್‌ನಿಂದ ಪಕ್ಷಾಂತರವನ್ನು ನೆಚ್ಚಿಕೊಂಡಿತ್ತು. ಮೋದಿ ಸರಕಾರವು ತನ್ನ ಮೊದಲ ಅಧಿಕಾರಾವಧಿಯಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲದ ಕೊರತೆಯಿಂದಾಗಿ ತನ್ನ ಅಜೆಂಡಾವನ್ನು ಮುಂದೊತ್ತುವಲ್ಲಿ ಹಲವಾರು ಬಾರಿ ಹಿನ್ನಡೆಯನ್ನು ಅನುಭವಿಸಿತ್ತು.

ಮಾರ್ಚ್‌ನಲ್ಲಿ 55 ಸ್ಥಾನಗಳಿಗೆ ಸೇರಿದಂತೆ ಒಟ್ಟು 61 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯನ್ನು ಚುನಾವಣಾ ಆಯೋಗವು ಪ್ರಕಟಿಸಿತ್ತಾದರೂ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಚುನಾವಣಾ ಪ್ರಕ್ರಿಯೆ ವಿಳಂಬಗೊಂಡಿತ್ತು.

 ಈ ಮೊದಲು 42 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 19 ಸ್ಥಾನಗಳಿಗಾಗಿ ಶುಕ್ರವಾರ ಚುನಾವಣೆ ನಡೆದಿದ್ದು,ಬಿಜೆಪಿಗೆ ಎಂಟು,ಕಾಂಗ್ರೆಸ್ ಮತ್ತು ವೈಎಸ್‌ಆರ್ ಕಾಂಗ್ರೆಸ್‌ಗೆ ತಲಾ ನಾಲ್ಕು ಮತ್ತು ಇತರರಿಗೆ ಮೂರು ಸ್ಥಾನಗಳಲ್ಲಿ ಗೆಲುವು ಲಭಿಸಿದೆ.

ಮಧ್ಯಪ್ರದೇಶ ಮತ್ತು ಗುಜರಾತ್ ಗಳಲ್ಲಿ ಹಲವಾರು ಕಾಂಗ್ರೆಸ್ ಶಾಸಕರ ಪಕ್ಷಾಂತರಗಳಿಂದಾಗಿ ಬಿಜೆಪಿ ತನ್ನ ಸಂಖ್ಯಾಬಲದ ಮೇಲೆ ದೊರೆಯಲಿದ್ದ ಸ್ಥಾನಗಳಿಗಿಂತ ಎರಡು ಹೆಚ್ಚು ಸ್ಥಾನಗಳನ್ನು ದಕ್ಕಿಸಿಕೊಂಡಿದೆ.

ಒಟ್ಟು 61 ಸ್ಥಾನಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಯು 3, ಬಿಜೆಡಿ ಮತ್ತು ಟಿಎಂಸಿ ತಲಾ 4, ಎಐಎಡಿಎಂಕೆ ಮತ್ತು ಡಿಎಂಕೆ ತಲಾ 3, ಎನ್‌ಸಿಪಿ, ಆರ್‌ಜೆಡಿ ಮತ್ತು ಟಿಆರ್‌ಎಸ್ ತಲಾ 2 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ,ಉಳಿದ ಸ್ಥಾನಗಳು ಇತರರ ಪಾಲಾಗಿವೆ.

  ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 303 ಸ್ಥಾನಗಳೊಂದಿಗೆ ದಾಖಲೆಯ ವಿಜಯವನ್ನು ಸಾಧಿಸಿದಾಗಿನಿಂದ ಮೇಲ್ಮನೆಯಲ್ಲಿ ಕಾಂಗ್ರೆಸ್,ಟಿಎಂಸಿ ಮತ್ತು ಎಡರಂಗ ಪ್ರಮುಖ ಆಧಾರಸ್ತಂಭಗಳಾಗಿದ್ದ ಪ್ರತಿಪಕ್ಷದ ಬಲ ಕುಸಿಯುತ್ತಿದ್ದುದು ನಿಚ್ಚಳವಾಗಿತ್ತು. ಕಾಂಗ್ರೆಸ್, ಟಿಡಿಪಿ ಮತ್ತು ಎಸ್‌ಪಿಯ ರಾಜ್ಯಸಭಾ ಸದಸ್ಯರು ಸೇರಿದಂತೆ ಬಿಜೆಪಿಗೆ ಪಕ್ಷಾಂತರಗಳಿಗೆ ಇದು ಪ್ರಚೋದನೆ ನೀಡಿತ್ತು. ಹಲವಾರು ಎನ್‌ಡಿಎಯೇತರ ಪ್ರಾದೇಶಿಕ ಪಕ್ಷಗಳು ಸಂಸತ್ತಿನಲ್ಲಿ ನಿರ್ಣಾಯಕ ವಿಷಯಗಳಲ್ಲಿ ಸರಕಾರವನ್ನು ಬೆಂಬಲಿಸಿದ್ದವು.

ಈಗ ಆಯ್ಕೆಯಾಗಿರುವವರಲ್ಲಿ ಬಿಜೆಪಿಯ ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 43 ಜನರು ಇದೇ ಮೊದಲ ಬಾರಿಗೆ ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಇಬ್ಬರೂ ನಾಯಕರು ಲೋಕಸಭಾ ಸದಸ್ಯರಾಗಿದ್ದರೂ 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸೋಲನ್ನುಂಡಿದ್ದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಎಂ.ತಂಬಿದುರೈ ಅವರೂ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News